

ಮಂಡ್ಯ: ಮತದಾರರ ಗುರುತಿನ ಚೀಟಿ ಮಾತ್ರ ಮತದಾನ ಪ್ರಕ್ರಿಯೆಯ ಅವಕಾಶವನ್ನು ಖಾತ್ರಿ ಪಡಿಸುವುದಿಲ್ಲ. ಅಂತೆಯೇ ಪಟ್ಟಿಯಲ್ಲಿ ಹೆಸರು ಕಡ್ಡಾಯವಾಗಿ ಇರಲೇಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ನಗರದ ಡಯಟ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ವೀಪ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಸಾರ್ವಜನಿಕರು ತಪ್ಪದೆ ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಬೇಕು. ಬಿಟ್ಟುಹೋಗಿದ್ದಲ್ಲಿ ನಮೂನೆ 6ರಲ್ಲಿ ಬಿಎಲ್ಒ ಅವರಿಗೆ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಮತ ಚಲಾಯಿಸುವ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಹೆಸರು ಬಿಟ್ಟುಹೋಗಿದೆ ಎಂದು ಗೊಂದಲಕ್ಕೆ ಒಳಗಾಗುವ ಬದಲು ಈಗಲೇ ಪಟ್ಟಿ ಪರಿಶೀಲಿಸಿಕೊಳ್ಳುವುದು ಒಳಿತು. ಹೆಸರು, ಭಾವಚಿತ್ರ ಬದಲಾವಣೆ. ಮೊಬೈಲ್ ಸಂಖ್ಯೆ ಸೇರ್ಪಡೆಯ ತಿದ್ದುಪಡಿಗೂ ಅವಕಾಶವಿದೆ. ಬೇರೆ ಸ್ಥಳಕ್ಕೆ ತೆರಳಿರುವವರು, ಮರಣ ಹೊಂದಿದವರ ಹೆಸರನ್ನು ಕೈಬಿಡಲು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದರಿಂದ ಒಂದಕ್ಕಿಂತ ಹೆಚ್ಚಿನ ಕಡೆ ಇದ್ದರೆ ಅದನ್ನು ಕೈಬಿಡಲು ಸಾಧ್ಯವಾಗುತ್ತದೆ. ಜತೆಗೆ ಗುಣಮಟ್ಟದ ಪಟ್ಟಿ ಸಿದ್ಧಪಡಿಸಬಹುದು. ಜತೆಗೆ ಪ್ರತಿಶತ ಸಹ ಹೆಚ್ಚಳವಾಗುತ್ತದೆ ಎಂದರು.
ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಬಹಳಷ್ಟು ಶ್ರಮ ವಹಿಸಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆ ವಿಶ್ವಕ್ಕೆ ಮಾದರಿ. ನಮ್ಮ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದಂತೆ ಬೇರೆ ದೇಶಗಳಿಗೆ ತೆರಳಿ ತರಬೇತಿ ನೀಡುತ್ತಿದ್ದಾರೆ. ಅಲ್ಲಿಯ ಅಧಿಕಾರಿಗಳು ಇಲ್ಲಿಗೆ ಬಂದು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆ ಬೇರೆ ರಾಜ್ಯಗಳಿಗಿಂತ ಉತ್ತಮವಾಗಿ ನಡೆಯುತ್ತದೆ. ಚಿಕ್ಕ ರಾಜ್ಯಗಳಲ್ಲಿ ಎರಡು ಅಥವಾ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ನಮ್ಮ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಸ್ವೀಪ್ ವತಿಯಿಂದ ಚುನಾವಣಾ ಪ್ರಕ್ರಿಯೆ ಕುರಿತಂತೆ ಪ್ರಬಂಧ, ಚಿತ್ರ ಬಿಡಿಸುವುದು ಸೇರಿದಂತೆ ಇತರ ಸ್ಪರ್ಧೆಗಳನ್ನು ಆಯೋಜಿಸಿದಾಗ ವಿದ್ಯಾರ್ಥಿಗಳು ಅದರ ಬಗ್ಗೆ ಅಧ್ಯಯನ ನಡೆಸುತ್ತಾರೆ. ಪಾಲಕರ ಬಳಿ ಮಾಹಿತಿ ಪಡೆದುಕೊಳ್ಳುತ್ತಾರೆ. ಇದರಿಂದ ಹೆಚ್ಚಿನ ಜಾಗೃತಿ ಮೂಡಿಸಿದಂತಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಂಜೀವಪ್ಪ, ಡಿಡಿಪಿಐ ಜವರೇಗೌಡ, ಡಿಡಿಪಿಯು ಉಮೇಶ್ ಇತರರಿದ್ದರು.