

ಹುಬ್ಬಳ್ಳಿ : ಮತಗಳ್ಳತನ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಮತ್ತು ಜನರಿಂದ ಪವಿತ್ರ ಮತದಾನದ ಹಕ್ಕು ಕಸಿದುಕೊಳ್ಳುವ ಹುನ್ನಾರಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಆರೋಪಿಸಿದ್ದಾರೆ.
ವೋಟ್ ಚೋರ್-ಗದ್ದಿ ಚೋಡ್ ಸಹಿ ಸಂಗ್ರಹದ ಅಭಿಯಾನದ ಅಂಗವಾಗಿ ಹಳೇ ಹುಬ್ಬಳ್ಳಿಯ ಬೀರಬಂದ್ ಓಣಿಯಲ್ಲಿ ಬುಧವಾರ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನ ಹಾಗೂ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ರಾಜ್ಯದ ಚುನಾವಣೆ ಗಮನದಲ್ಲಿಟ್ಟುಕೊಂಡು ಮತಗಳ್ಳತನ ಜಾಗೃತಿ ಅಭಿಯಾನ ಆರಂಭಿಸಿಲ್ಲ. ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ವಿರುದ್ಧ ಧ್ವನಿ ಎತ್ತಿದ್ದಾರೆ. ದೇಶಾದ್ಯಂತ ಜಾಗೃತಿ ಮೂಡಿಸುವುದಕ್ಕಾಗಿ ಕೋಟಿ ಸಹಿ ಸಂಗ್ರಹಿಸಲಾಗುತ್ತಿದೆ. ಚುನಾವಣಾ ಆಯೋಗದ ಭ್ರಷ್ಟಾಚಾರ ಹಾಗೂ ಬಿಜೆಪಿ ದುರಾಡಳಿತ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಚುನಾವಣಾ ಆಯೋಗ ಪ್ರಾಮಾಣಿಕವಾಗಿತ್ತು. ಆದರೆ, ಬಿಜೆಪಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು, ಆಯೋಗವನ್ನು ಕೈಗೊಂಬೆಯನ್ನಾಗಿಸಿದೆ ಎಂದು ದೂರಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಚುನಾವಣಾ ಆಯೋಗದ ಜತೆಗೆ ಸಿಬಿಐ, ಇಡಿ ಸೇರಿದಂತೆ ಇನ್ನಿತರ ಸಂಸ್ಥೆಗಳನ್ನು ತನ್ನ ಕೈಗೊಂಬೆಯನ್ನಾಗಿಸಿಕೊಂಡಿದೆ ಎಂದು ಆರೋಪಿಸಿದರು.
ಮತಗಳ್ಳತನದ ಬಗ್ಗೆ ತನಿಖೆ ನಡೆಸಬೇಕಿದ್ದ ಚುನಾವಣಾ ಆಯೋಗ, ತನ್ನ ಕರ್ತವ್ಯ ನಿರ್ವಹಿಸದೇ ಅಫಿಡಿವೇಟ್ ನೀಡುವಂತೆ ಹೇಳಿ ಜಾರಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಮತಗಳ್ಳತನ ವಿರುದ್ಧ ಸಹಿ ಸಂಗ್ರಹಿಸುವ ಅಭಿಯಾನದ ಮೂಲಕ ರಾಜ್ಯದಲ್ಲಿ ಒಂದು ಕೋಟಿ ಮತಗಳ್ಳತನವನ್ನು ಬಯಲಿಗೆ ಎಳೆಯುತ್ತೇವೆ. ಮತಗಳ್ಳತನದಿಂದಾಗಿಯೇ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಿಂದ ನಾನು ಜಯಗಳಿಸಿದೆ. ಇಲ್ಲದಿದ್ದರೆ, ಗೆಲುವಿನ ಮತಗಳ ಅಂತರ ಇನ್ನೂ ಹೆಚ್ಚಾಗುತ್ತಿತ್ತು. ನನ್ನ ಕ್ಷೇತ್ರದಲ್ಲಿ 50 ಸಾವಿರಕ್ಕೂ ಅಧಿಕ ಮತಗಳ್ಳತನವಾಗಿದೆ ಎಂದು ಹೇಳಿದರು.
ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಸದಾನಂದ ಡಂಗನವರ, ಅಲ್ತಾಫ್ ಕಿತ್ತೂರ, ಮೆಹಮೂದ ಕೋಳೂರು, ದೊರೆರಾಜ ಮಣಿಕುಂಟ್ಲಾ, ಮೋಹನ ಅಸುಂಡಿ, ಅಬ್ದುಲ್ ಸಮದ್ ಗುಲ್ಬರ್ಗಾ, ಶಾರುಖ ಮುಲ್ಲಾ, ಮರಿಯಂ ಮುಲ್ಲಾ, ಮಾರುತಿ ದೊಡ್ಡಮನಿ, ನಾಸಿರ ಅಸುಂಡಿ ಹಾಗೂ ಇತರರು ಇದ್ದರು.