ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಮತ ನೀಡಿ, ಎಂ.ಬಿ.ಪಾಟೀಲ

m.b.patil cngress prachar (1)
ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿದರು.
Published on

ವಿಜಯಪುರ: ಸುಳ್ಳು, ಮೋಸ, ಆಸೆ, ಆಮಿಷ ತೋರಿಸುವವರಿಗೆ ಮತದಾರರು ಬಲಿಯಾಗದೇ ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಮತ ಹಾಕಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಜನರನ್ನು ಹೆದರಿಸಿ, ಬೆದರಿಸುತ್ತಿದ್ದವರು ಈಗ ಮೊಸಳೆ ಕಣ್ಣೀರು ಹಾಕುತ್ತ ಅಡ್ಡ ಬೀಳುವ ಮೂಲಕ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ. ಅಂಥವರನ್ನು ನಂಬಿದರೆ ಜನರು ತಾವೇ ಕಣ್ಣೀರು ಹಾಕುತ್ತ ಕೆಲಸ ಕಾರ್ಯಗಳಿಗೆ ಅಡ್ಡ ಬೀಳುವ ದುಸ್ಥಿತಿ ಬರುತ್ತದೆ. ಇವರ ಬಗ್ಗೆ ಜಾಗೃತರಾಗಿರಬೇಕು. ಜಾತಿಯಿಂದ ಹೊಟ್ಟೆ ತುಂಬುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ನಾನು ಜಲ ಸಂಪನ್ಮೂಲ ಸಚಿವನಾದ ಬಳಿಕ ಕೃಷ್ಣೆ ಅಷ್ಟೇ ಅಲ್ಲ, ಕಾವೇರಿ ಭಾಗದ ನೀರಾವರಿ ಯೋಜನೆಗಳಿಗೂ ಕೆಲಸ ಮಾಡಿದ್ದೇನೆ. ಕಾರಿಗೆ ಕೆಂಪು ಲೈಟ್ ಹಾಕಿಕೊಂಡು ಮೆರವಣಿಗೆ ಮಾಡದೇ ಮನೆ, ಮಠ ಬಿಟ್ಟು ನೀರಾವರಿ ಯೋಜನೆಗಳಿಗಾಗಿ ಶ್ರಮಿಸಿದ್ದೇನೆ. ಕಾಲಿಗೆ ಶಸ್ತ್ರ ಚಿಕಿತ್ಸೆಯಾಗಿದ್ದರೂ ವಿಶ್ರಾಂತಿ ಪಡೆಯದೆ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಬೊಗಸೆ ನೀರು ಕೊಡುವ ಕೆಲಸ ಮಾಡಿದ್ದೇನೆ. ಈ ಮೂಲಕ ಸೂರ್ಯ- ಚಂದ್ರ ಇರುವವರೆಗೆ ಕುಟುಂಬಗಳು ಶಾಶ್ವತವಾಗಿ ನೆಮ್ಮದಿಯ ಜೀವನ ಸಾಗಿಸುವಂತೆ ಮಾಡಿದ್ದೇನೆ. ನೂರಾರು ಎಕರೆ ಜಮೀನು ಹೊಂದಿದ್ದರೂ ನೀರಿಗಾಗಿ ಕಷ್ಟ ಪಡುತ್ತಿದ್ದ ಸಾಹುಕಾರರು ಈಗ ಉತ್ತಮ ಬೆಳೆ ಬೆಳೆಯುವ ಮೂಲಕ ನಿಜವಾಗಿ ಸಾಹುಕಾರರಾಗುವಂತೆ ಮಾಡಿದ್ದೇನೆ ಎಂದು ಅವರು ಹೇಳಿದರು.

ಮುಖಂಡರಾದ ಚನ್ನಪ್ಪ ಕೊಪ್ಪದ, ವಿ.ಎಸ್.ಪಾಟೀಲ, ಬಿ.ಜಿ. ಬಿರಾದಾರ, ಈರಗೊಂಡ ಬಿರಾದಾರ, ಸಂಗಮೇಶ ಬಬಲೇಶ್ವರ, ಆರ್.ಎಸ್.ಕೋಟ್ಯಾಳ ಸಂಗಮೇಶ ಬೂದಿಹಾಳ, ಅಣ್ಣಾಸಾಹೇಬ ಕೋಟ್ಯಾಳ, ಶಂಕರ ಕೋಟ್ಯಾಳ, ಬಾಬು ಕೋಟ್ಯಾಳ, ಎ.ಬಿ.ಬೂದಿಹಾಳ, ಧರ್ಮಣ್ಣ ಬಿಳೂರ, ಗುರು ಜಂಗಮಶೆಟ್ಟಿ, ಹಣಮಂತ ಬಡಚಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net