ಸೂಕ್ತ ವ್ಯಕ್ತಿಗೆ ಮತ ಹಾಕಿ ಚುನಾವಣಾ ಹಬ್ಬ ಯಶಸ್ವಿಗೊಳಿಸಿ

7
Published on

ಮೈಸೂರು: ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಪ್ರತಿಯೊಬ್ಬ ಮತದಾರರೂ ಯಾವುದೇ ಜಾತಿ, ಮತ, ಧರ್ಮವನ್ನು ನೋಡದೆ ಸೂಕ್ತವಾದ ವ್ಯಕ್ತಿಗೆ ಕಡ್ಡಾಯವಾಗಿ ಮತ ಹಾಕುವ ಮೂಲಕ ಹಬ್ಬವನ್ನು ಯಶಸ್ವಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ ನೀಡಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣಾ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗಬಾರದು. ವಿದ್ಯಾವಂತರು ಮತದಾನದ ಪ್ರಾಮುಖ್ಯವನ್ನು ತಿಳಿದುಕೊಂಡು ತಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಜನರಿಗೂ ಇದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ನೈತಿಕ ಮತದಾನ ಮಾಡುವಂತೆ ಮಾಡಬೇಕು ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಶೇ.70 ರಷ್ಟು ಮತದಾನವಾಗಿದ್ದು, 2021ರ ವಿಧಾನಸಭಾ ಚುನಾವಣೆಯಲ್ಲಿ ಶೇ.75 ರಷ್ಟು ಮತದಾನವಾಗಿತ್ತು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಮಾಹಿತಿ ನೀಡಿದರು.
ಚುನಾವಣೆಯು ಹತ್ತಿರವಾಗುತ್ತಿದ್ದು, ಪ್ರತಿಯೊಬ್ಬರೂ ವೋಟಿಂಗ್ ಹೆಲ್ಪಿಂಗ್ ಆ್ಯಪ್ ಮೂಲಕ ತಮ್ಮ ಹೆಸರು ಹಾಗೂ ತಮ್ಮ ಕುಟುಂಬದವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರದಲ್ಲಿ ತಮ್ಮ ಪೋಲಿಂಗ್ ಸ್ಟೇಷನ್ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net