

ಕೆ.ಎಂ. ದೊಡ್ಡಿ: ಮತದಾನ ಮಾಡುವುದು ಅರ್ಹ ಮತದಾರರ ಮೂಲಭೂತ ಕರ್ತವ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಗುರುವಾರ ಆಯೋಜಿಸಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
18 ವರ್ಷ ವಯಸ್ಸಿನ ಎಲ್ಲ ವಯಸ್ಕರೂ ಕೂಡ ಮತದಾನ ಮಾಡಲು ನಮ್ಮ ಸಂವಿಧಾನ ಮುಕ್ತ ಅವಕಾಶ ಕಲ್ಪಿಸಿದ್ದು, ಆದರೂ ಹಲವು ಕಾರಣಗಳಿಂದ ಮತದಾನದಿಂದ ದೂರ ಉಳಿಯುವ ನಾಗರಿಕರೂ ನಮ್ಮ ನಡುವೆ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬರಿಗೂ ದೇಶದ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅದರಂತೆ ದೇಶದ ಪ್ರಜಾಪ್ರಭುತ್ವದ ಘನತೆಗಾಗಿ ಮತ ಚಲಾವಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮನವಿ ಮಾಡಿದರು.
18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಅಂಗವಿಕಲರಿಗೂ ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ವ್ಹೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. 85 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯ ನಾಗರಿಕರು ನೋಂದಣಿ ಮಾಡಿಕೊಂಡು ಮನೆಯಿಂದಲೇ ಮತ ಚಲಾವಣೆ ಮಾಡಬಹುದಾಗಿದೆ ಎಂದರು.
ಬಳಿಕ ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ, ತಾಪಂ ಇಒ ಜಿ.ಆರ್.ಮಂಜುನಾಥ್ ಮಾತನಾಡಿದರು. ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಪಂಜು ಮತ್ತು ಮೇಣದಬತ್ತಿ ಹಿಡಿದು ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಮತದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಿದರು. ತಹಸೀಲ್ದಾರ್ ಸೋಮಶೇಖರ್, ಸಹಾಯಕ ನಿರ್ದೇಶಕ ಟಿ.ವಿ. ಮಂಜುನಾಥ್, ಪಿಡಿಒ ಎನ್.ಸುಧಾ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ರವೀಂದ್ರ, ಅಂಬರಹಳ್ಳಿ ಸ್ವಾಮಿ, ಪ್ರದೀಪ್, ಭಾವನಾ ಮತ್ತಿತರರಿದ್ದರು.