

ವಿಜಯಪುರ: ಹಣ ಇದ್ದವರು ರಾಜಕಾರಣಕ್ಕೆ ಬರುವುದು ಪುನಃ ಹಣ ಗಳಿಸುವುದಕ್ಕೆ. ಆದರೆ ಹಣ ಇರದವರು ರಾಜಕಾರಣಕ್ಕೆ ಬರುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸುವುದಕ್ಕಾಗಿ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನದಾಸ್ ಅಗರವಾಲ್ ಹೇಳಿದರು.
ನಗರದ ಸಂಗನಬಸವನ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಾಮಾಣಿಕ, ಪಕ್ಷ ನಿಷ್ಠ ಹಾಗೂ ಜನಪರ ಕಾಳಜಿಯುಳ್ಳ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಈಗಾಗಲೇ ಸಂಸದನಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಂದಿನ 5 ವರ್ಷಗಳ ಕಾಲ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಚುನಾವಣೆಯಲ್ಲಿ ಹಣ ಖರ್ಚು ಮಾಡದೇ ಪುಕ್ಸಟ್ಟೆ ಗಿರಾಕಿ ಆಗಿರಬಹುದು. ಆದರೆ ಮುಂದಿನ 5 ವರ್ಷಗಳಲ್ಲಿ ಜನರ ಕೆಲಸವನ್ನು ಪುಕ್ಸಟ್ಟೆಯಾಗಿ ಮಾಡಿ ಕೊಡುತ್ತೇನೆಂದು ಹೇಳಿದರು.
ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ರಮೇಶ ಭೂಸನೂರ, ಎಸ್.ಕೆ. ಬೆಳ್ಳುಬ್ಬಿ, ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ, ಅರುಣ ಶಹಾಪೂರ, ರಾಜಶೇಖರ ಶೀಲವಂತ, ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಸ್ವಪ್ನಾ ಕಣಮುಚನಾಳ ಮತ್ತಿತರರಿದ್ದರು. ಈರಣ್ಣ ರಾವೂರ ಸ್ವಾಗತಿಸಿದರು. ಮುಳುನಗೌಡ ಪಾಟೀಲ ನಿರೂಪಿಸಿದರು.