

ಸಾಗರ: ನಮ್ಮ ಸರ್ಕಾರದ ಆಡಳಿತವಿದ್ದಾಗ ಸಾಗರದ ರಸ್ತೆಗಳು ಹೇಗಿದ್ದವು, ಈಗ ಹೇಗಾಗಿವೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ. ಸಾಗರದ ಗಣಪತಿ ಕೆರೆ ಹೇಗೆ ಅಭಿವೃದ್ಧಿ ಪಡಿಸಿದ್ದೆವು?, ಈಗ ಹೇಗಾಗಿದೆ ಎಂಬುದನ್ನು ನೀವೇ ನೋಡಿ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಬೃಹತ್ ಬೈಕ್ ರ‌್ಯಾಲಿ ಬಳಿಕ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಗರ ಕ್ಷೇತ್ರದ ಶಾಸಕರಿಗೆ ಯಡಿಯೂರಪ್ಪ, ರಾಘವೇಂದ್ರ, ನನ್ನನ್ನು ಬೈಯ್ಯುವುದೇ ಕೆಲಸವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಕಾಗೋಡು ತಿಮ್ಮಪ್ಪ ಅವರ ಹೆಸರನ್ನು ಹೊರತು ಪಡಿಸಿ ಅವರ ಪಕ್ಷದ 10 ಜನರ ಹೆಸರನ್ನು ಹೇಳಲಿ. ಆಗ ಮತ ಹಾಕುತ್ತೇವೆ ಎಂದು ಸವಾಲು ಎಸೆದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಹೊರತು ಅವರ ಯಾವ ಆದರ್ಶಗಳನ್ನು ಮುನ್ನಡೆಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಹಿಳೆ ನಡುರಾತ್ರಿ ಯಾವುದೇ ಭಯವಿಲ್ಲದೆ ಓಡಾಡುವಂಥಾದರೆ ಅದು ನಿಜವಾದ ಸ್ವಾತಂತ್ರೃ ಎಂದು ಗಾಂಧೀಜಿ ಹೇಳಿದ್ದರು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಪರಿಸ್ಥಿತಿ ಹೇಗಿದೆ ಅಂದರೆ ಹಗಲಿನಲ್ಲಿಯೇ ಹೆಣ್ಣು ಮಕ್ಕಳು ಓಡಾಡದಂತಹ ಸ್ಥಿತಿ ಎದುರಾಗಿದೆ. ಅರಾಜಕತೆ ಸೃಷ್ಟಿಯಾಗಿದೆ, ಹೆಣ್ಣು ಮಕ್ಕಳಿಗೆ ಯಾವುದೇ ಭದ್ರತೆ ಇಲ್ಲ ಎಂದು ದೂರಿದರು.
ರಾಷ್ಟ್ರಪತಿ ದ್ರೌಪತಿ ಮರ್ಮು ಮಹಿಳೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆ… ಹೀಗೆ ಮಹಿಳೆಯರನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಮುನ್ನಡೆಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ. ಮಹಿಳೆಯರ ಅಭಿವೃದ್ಧಿಗಾಗಿ ಮೋದಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಗೃಹ ಸಚಿವರು ವೈಯಕ್ತಿಕ ವಿಚಾರ ಎಂದು ಲಘುವಾಗಿ ಮಾತನಾಡಿದರು. ಮುಖ್ಯಮಂತ್ರಿಗಳು ಸಹ ಇದಕ್ಕೆ ಸಮ್ಮತಿಸಿದರೆ ಹೊರತು ಅಗತ್ಯ ಕ್ರಮಕೈಗೊಳ್ಳಲಿಲ್ಲ. ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇಂತಹ ಪ್ರಕರಣಗಳಿಗೆ ಜಾತಿ, ಧರ್ಮದ ಬಣ್ಣ ಹಚ್ಚಲಾಗುತ್ತಿದೆ ಎಂದು ಹೇಳುತ್ತಲೇ ಅಲ್ಪಸಂಖ್ಯಾತರನ್ನು ರಕ್ಷಿಸುವ ಮತ್ತು ಓಲೈಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದೆಲ್ಲವನ್ನು ಜನತೆ ಗಮನಿಸುತ್ತಿದ್ದಾರೆ. ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೆ ತಂದು, ಅಭಿವೃದ್ಧಿಯ ಜತೆಯಲ್ಲಿ ನಿಜವಾದ ಫಲಾನುಭವಿಗಳಿಗೆ ಅದನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಸಂಸದ ಬಿ.ವೈ.ರಾಘವೇಂದ್ರ ಮಾಡಿದ್ದಾರೆ ನಿಮ್ಮ ರಾಘಣ್ಣನಿಗೆ ಮತ್ತೊಮ್ಮೆ ಅವಕಾಶ ನೀಡಿ, ಮೋದಿ ಅವರ ಕೈ ಬಲಪಡಿಸಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷೆ ಮಧುರ ಶಿವಾನಂದ್, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ದೇವೇಂದ್ರಪ್ಪ, ಪ್ರಸನ್ನ ಕೆರೆಕೈ, ವಿ.ಮಹೇಶ್, ಅರುಣ್ ಕುಗ್ವೆ , ಹರಿಕೃಷ್ಣ, ಹೊನಗೋಡು ರತ್ನಾಕರ, ಹರೀಶ್ ಮೂಡಳ್ಳಿ, ಪರಶುರಾಮ್, ಕೆ.ಆರ್.ಗಣೇಶ್‌ಪ್ರಸಾದ್, ಪ್ರಶಾಂತ್ ಇತರರಿದ್ದರು.