ಕಾಂಗ್ರೆಸ್‌ಗೆ ಮತ ದೇಶದ ಭವಿಷ್ಯಕ್ಕೆ ಹಿತ

Vote for Congress is good for the future of the country
ಬಾದಾಮಿ ನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾದಾಮಿ ವಿಧಾನಸಭೆ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಎಸ್.ಆರ್. ಪಾಟೀಲ, ಶಾಸಕ ಜೆ.ಟಿ. ಪಾಟೀಲ, ಅಭ್ಯರ್ಥಿ ಸಂಯುಕ್ತಾ ಪಾಟೀಲ ಇತರರಿದ್ದರು.
Published on

ಬಾದಾಮಿ: ಮೊದಲ ಬಾರಿಗೆ ಅಧಿಕಾರಕ್ಕೆ ಬರುವ ಮುನ್ನ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳನ್ನು ಹಾಕುತ್ತೇನೆ, ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದೆಲ್ಲಾ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಕಳೆದ ಹತ್ತು ವರ್ಷಗಳಿಂದ ಯಾವುದೇ ಜನ ಪರ ಯೋಜನೆ ಜಾರಿ ಮಾಡಿಲ್ಲ. ಅವರೊಬ್ಬರು ಮಹಾನ್ ಸುಳ್ಳುಗಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತೀವ್ರ ವಾಗ್ದಾಳಿ ಮಾಡಿದರು.

ಬುಧವಾರ ನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾದಾಮಿ ವಿಧಾನಸಭೆ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದೆ. ಪಡಿತರ ಚೀಟಿ, ಪಿಂಚಣಿ ಯೋಜನೆ, ಮತದಾನದ ಹಕ್ಕು, ರೈತರ ಸಾಲ ಮನ್ನಾ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮೋದಿ, ಮೋದಿ ಎಂದು ಹೇಳುವವರು ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ದೇಶ ರಕ್ಷಣೆ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರೈತರು ಪ್ರತಿಭಟನೆ ನಡೆಸು 700ಕ್ಕೂ ಅಧಿಕ ಜನರು ಮರಣ ಹೊಂದಿದರು. ರೈತರ ವಿರೋಧಿ ಕೃಷಿ ಕಾಯ್ದೆ ಜಾರಿಗೆ ತಂದರು. ಇದೊಂದು ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಾಗಿದೆ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಮೋದಿ ಸರ್ಕಾರ ಬಡವರ, ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ ಎಂದು ಹೇಳುತ್ತಾರೆ. ಆದರೆ ಉದ್ಯಮಿಗಳ 14.50 ಲಕ್ಷ ಕೋಟಿ ರೂ. ಸಾಲ ಮನ್ನಾಮಾಡಿದ್ದಾರೆ. ಇದು ಉದ್ಯಮಿಗಳ ಪರ ಸರ್ಕಾರವಾಗಿದೆ. ಮೋದಿಯವರು ಬಂದ ನಂತರ ಸಾಲ ದ್ವಿಗುಣಗೊಂಡಿದೆ. ಎಸ್‌ಬಿಐ ಚುನಾವಣೆ ಬಾಂಡ್ ಮೂಲಕ ದೇಶದಲ್ಲಿ ದೊಡ್ಡ ಹಗರಣ ನಡೆದಿದೆ. ಇಡಿ, ಐಟಿ ದಾಳಿ ಮೂಲಕ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡು ಸರ್ಕಾರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬಿಜೆಪಿ ಬಳಿ ಯಾವುದೇ ಹೇಳಿಕೊಳ್ಳುವ ವಿಷಯವೇ ಇಲ್ಲ ಎಂದರು. ಲೋಕಸಭೆ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಸಚಿವ ಎಸ್.ಆರ್. ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ಮಾತನಾಡಿ, ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಶಿವಾನಂದ ಕುಳಗೇರಿ, ನಾಗರಾಜ ಮನ್ನಿಕೇರಿ ಇತರರಿದ್ದರು.

ಸಂಜಯ ಬರಗುಂಡಿ ನಿರೂಪಿಸಿದರು. ಮಲ್ಲಪ್ಪ ಗಾರವಾಡ ವಂದಿಸಿದರು. ಸಭೆಯಲ್ಲಿ ಬಾದಾಮಿ ಮತಕ್ಷೇತ್ರದ ಸಹಸ್ರಾರು ಕಾರ್ಯಕರ್ತರು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net