61 ಅಭ್ಯರ್ಥಿಗಳ ಹಣೆಬರಹ ಬಹಿರಂಗ ಶನಿವಾರ

12-05-Shiva-2
Published on

ರಾಯಚೂರು: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 61 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಮತ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಅಭ್ಯರ್ಥಿಗಳ ಹಣೆಬರಹ ಶನಿವಾರ ಬಹಿರಂಗವಾಗಲಿದ್ದು, ಮಧ್ಯಾಹ್ನದೊಳಗೆ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ.

ಏಳು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಆಮ್ ಆದ್ಮಿ ಮತ್ತು ಬಿಎಸ್ಪಿ 4 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ. ಕೆಆರ್‌ಪಿಪಿ ಸೇರಿದಂತೆ ನೋಂದಾಯಿತ ಪಕ್ಷಗಳ 18 ಹಾಗೂ ಪಕ್ಷೇತರ 14 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿ ಗೆಲವಿನ ಮಾಲೆ ಯಾರಿಗೆ ಒಲಿಯಲಿದೆ ಎಂದು ಮತ ಎಣಿಕೆಯಲ್ಲಿ ತಿಳಿದು ಬರಲಿದೆ.

ಎಲ್ಲ ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿ ನಡೆದಿರುವುದರಿಂದ ಫಲಿತಾಂಶದ ಬಗ್ಗೆ ಎಲ್ಲರಲ್ಲಿಯೂ ಹೆಚ್ಚಿನ ಕುತೂಹಲವಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾನೆ ಎನ್ನುವ ವಿಶ್ವಾಸದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಲಕ್ಷಾಂತರ ರೂ. ಬೆಟ್ಟಿಂಗ್ ಕಟ್ಟಿದ್ದಾರೆ. ಹೀಗಾಗಿ ಫಲಿತಾಂಶದ ಮೇಲೆ ಎಲ್ಲರ ಗಮನ ನಿಂತಿದೆ.

ರಾಯಚೂರು ನಗರ ಮತ್ತು ಗ್ರಾಮೀಣ, ಮಾನ್ವಿ, ಮಸ್ಕಿ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿಯಿದ್ದರೆ, ಸಿಂಧನೂರಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆಯಿದೆ. ಲಿಂಗಸುಗೂರಿನಲ್ಲಿಯೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜತೆಗೆ ಕೆಆರ್‌ಪಿಪಿ ನಡುವೆ ಗೆಲುವಿಗೆ ಹಣಾಹಣಿಯಿದೆ. ದೇವದುರ್ಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಪರ್ಧೆ ನಡೆಯುತ್ತಿದೆ.

ಅಭ್ಯರ್ಥಿಗಳು ಅವರದೇ ಆದ ಲೆಕ್ಕಾಚಾರದಲ್ಲಿ ತಮ್ಮದೇ ಗೆಲುವು ಎಂದು ಹೇಳಿಕೊಳ್ಳುತ್ತಿದ್ದರೂ ಗೆಲುವು ಅಷ್ಟು ಸುಲಭವಲ್ಲ ಎನ್ನುವುದು ಅವರನ್ನು ಕಾಡುತ್ತಿದೆ. ಮದುವೆ ಸೀಸನ್ ಇರುವುದರಿಂದ ಅಭ್ಯರ್ಥಿಗಳು ಆಪ್ತರು, ಕಾರ್ಯಕರ್ತರ ಮದುವೆಗಳಿಗೆ ಹಾಜರಾಗುವ ಮೂಲಕ ಮತ ಎಣಿಕೆಯ ಆತಂಕವನ್ನು ಮರೆಯಲು ಪ್ರಯತ್ನ ನಡೆಸುತ್ತಿದ್ದಾರೆ.

ಕೆಲವು ಅಭ್ಯರ್ಥಿಗಳು ತಮ್ಮ ಮತ ಎಣಿಕೆ ಏಜೆಂಟ್‌ರನ್ನು ಸಿದ್ಧಗೊಳಿಸಿದ್ದು, ಹಲವರು ಮತ ಎಣಿಕೆ ಕೇಂದ್ರದಿಂದ ದೂರವಿದ್ದು, ಗೆಲುವಿನ ಸಾಧ್ಯತೆಗಳಿದ್ದರೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಹೋಗೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಗೆಲುವು ವಿಶ್ವಾಸದಲ್ಲಿರುವ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದ ಹತ್ತಿರ ಬನ್ನಿಗೆ ವಿಜಯೋತ್ಸವ ಆಚರಿಸೋಣ ಎಂದು ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net