

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಮತ ಎಣಿಕೆ ಜೂ.4ರಂದು ಸುರತ್ಕಲ್‌ನ ಎನ್‌ಐಟಿಕೆಯಲ್ಲಿ
ನಡೆಯಲಿದ್ದು ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಚುನಾವಣಾ ಆಯೋಗದ ಅಧಿಕೃತ ಗುರುತಿನ ಚೀಟಿ ಹೊಂದಿದವರಿಗೆ 3 ಹಂತದ ಬಿಗಿ ತಪಾಸಣೆ ಬಳಿಕ ಪ್ರವೇಶ ದೊರೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮತ ಎಣಿಕೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ ಅವರು ಮತ ಎಣಿಕೆ ಕೇಂದ್ರದಲ್ಲಿ ಭದ್ರತಾ ಕೊಠಡಿ ಬೆಳಗ್ಗೆ 6ರಿಂದ 7ರ ಅವಧಿಯಲ್ಲಿ ತೆರೆಯಲಾಗುತ್ತದೆ. ಬೆಳಗ್ಗೆ 8ಕ್ಕೆ ಅಂಚೆ ಮತಗಳ ಎಣಿಕೆ, 8.30ಕ್ಕೆ ಇವಿಎಂ ಮತ ಎಣಿಕೆ ಆರಂಭವಾಗಲಿದೆ. ಕೇಂದ್ರದ ಸುತ್ತಲು 100 ಮೀ. ಅಂತರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ ಎಮದರು.
ಮತ ಎಣಿಕೆ ಕೇದ್ರದ ಸುತ್ತ ಹಾಗೂ ಎಣಿಕೆ ಕೇಂದ್ರದ ಕೊಠಡಿಯೊಳಗೆ ಸಿಸಿಟಿವಿ ಕಣ್ಗಾವಲಿದೆ. ಎಣಿಕೆ ಪ್ರಕ್ರಿಯೆ ಶಾಂತಿಯುತ ಹಾಗೂ ಸುರಕ್ಷಿತವಾಗಿ ನಡೆಸಲು ಪ್ರತಿ ಎಣಿಕೆ ಮೇಜಿನ ಸಿಬ್ಬಂದಿ ಮತ್ತು ಏಜೆಂಟರ ಮಧ್ಯೆ ಸ್ಟೀಲ್ ಪ್ರೇಮ್ ಜಾಲರಿ ಅಳವಡಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಚುನಾವಣಾ ಏಜೆಂಟರು ಬೆಳಗ್ಗೆ 6ರಿಂದ 7 ಗಂಟೆಯೊಳಗೆ ಪ್ರವೇಶಿಸಿರಬೇಕು. ಬಳಿಕ ಅವಕಾಶ ನೀಡಲಾಗದು ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.
ದ.ಕ. ಜಿಲ್ಲೆಯಲ್ಲಿ ಇವಿಎಂಗಳಲ್ಲಿ 1409653 ಮತಗಳು ಚಲಾವಣೆಯಾಗಿದ್ದು, 8537 ಅಂಚೆ ಮತ ಚಲಾವಣೆಯಾಗಿದೆ. ಸೇವಾ ಮತದಾರರಿಗೆ ಒಟ್ಟು 536 ಮತಪತ್ರ ಕಳುಹಿಸಲಾಗಿದ್ದು, ಇದುವರೆಗೆ 231 ಮತ ಪತ್ರಗಳು ಸ್ವೀಕೃತವಾಗಿದೆ. ಮತ ಎಣಿಕೆ ಆರಂಭಕ್ಕಿಂತ ಒಂದು ಗಂಟೆ ಮುಂಚಿತವಾಗಿಯೂ ಸೇವಾ ಮತದಾರರ ಮತಪತ್ರಗಳನ್ನು ಸ್ವೀಕರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಇವಿಎಂಗಳ ಮತ ಎಣಿಕೆಯು ಪ್ರತಿ ವಿಧಾನಸಭಾ ಕ್ಷೇತ್ರವಾರು ಎಂಟು ಕೊಠಡಿಗಳಲ್ಲಿ ತಲಾ 14 ಟೇಬಲ್‌ಗಳಂತೆ ಒಟ್ಟು 112 ಟೇಬಲ್‌ಗಳಲ್ಲಿ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಕೊಠಡಿ ಹಾಗೂ 20 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇವಿಎಂ ಮತ ಎಣಿಕೆಗಾಗಿ ಚುನಾವಣಾಧಕಾರಿ ಹೊರತುಪಡಿಸಿ 8 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವಿಎಂ, ಅಂಚೆ ಮತ ಪತ್ರ ಸೇರಿದಂತೆ ಎಣಿಕೆ ಕೇಂದ್ರದಲ್ಲಿ ಒಟ್ಟು 554 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.
*ಬಿಗಿ ಭದ್ರತೆ
ಸುರತ್ಕಲ್‌ನ ಎನ್‌ಐಟಿಕೆಯ ಭದ್ರತಾ ಕೊಠಡಿಗೆ ಮೂರು ಪಾಳಿಯಲ್ಲಿ ಭದ್ರತೆ ಒದಗಿಸಲಾಗಿದೆ. ಮತ ಎಣಿಕೆಯ ದಿನದಂದು ಗುರುತಿನ ಚೀಟಿ ಹೊಂದಿರುವವರಿಗೆ ಎಣಿಕೆ ಕೇಂದ್ರಕ್ಕೆ ಮೂರು ಹಂತದ ತಪಾಸಣೆಯ ಮೂಲಕವೇ ಪ್ರವೇಶ ನೀಡಲಾಗುತ್ತದೆ. ಡಿಸಿಪಿ, ಎಸಿಪಿ ಸೇರಿದಂತೆ ಒಟ್ಟು 850 ಪೊಲೀಸ್ ಸಿಬ್ಬಂದಿ ಮತ ಎಣಿಕೆ ದಿನದಂದು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದರು.
* ಎಣಿಕೆ ಕೇಂದ್ರಕ್ಕೆ ಮೊಬೈಲ್ ನಿಷೇಧ
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಪ್ಯಾಡ್, ಕ್ಯಾಲ್ಕುಲೇಟರ್, ಕತ್ತರಿ, ಚೂರಿ, ಲೈಟರ್, ಬೆಂಕಿಪೊಟ್ಟಣ, ಇಲೆಕ್ಟ್ರಾನಿಕ್
ವಸ್ತುಗಳು, ಶಸ್ತ್ರಾಸ್ತ್ರ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಅಥವಾ ಏಜೆಂಟರು ಪೆನ್, ಹಾಳೆ ನೋಟ್‌ಪ್ಯಾಡ್ ಹಾಗೂ 17ಸಿ ಫಾರಂ ಮಾತ್ರ ಕೊಂಡೊಯ್ಯಲು ಅವಕಾಶವಿದೆ.
*ದೂರು ಸಲ್ಲಿಸಲು ಅವಕಾಶ
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ ಎಣಿಕೆಗೆ ಸಂಬಂಧಿಸಿ ದೂರು ಸಲ್ಲಿಸಲು ಅಥವಾ ಮಾಹಿತಿ ಪಡೆಯಲು ಜೂ. 1ರಿಂದ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಸಾರ್ವಜನಿಕರು ಈ ಸಂಬಂಧ 1950
ಸಹಾಯವಾಣಿಯನ್ನು ಸಂಪರ್ಕಿಸಬಹುದು.
* ಪಾರ್ಕಿಂಗ್ ವ್ಯವಸ್ಥೆ
ಅಭ್ಯರ್ಥಿ ಹಾಗೂ ಏಜೆಂಟರಿಗೆ ಎನ್‌ಐಡಿಕೆ ಪ್ರಮುಖ ದ್ವಾರದ ಮಹಿಳಾ ಹಾಸ್ಟೆಲ್ ಬಳಿ ಹಾಗೂ ಮತ ಎಣಿಕೆ ಏಜೆಂಟ್ ಮತ್ತು
ಮಾಧ್ಯಮ ಪ್ರತಿನಿಧಿಗಳಿಗೆ ಅಡ್ಕ ಸರ್ಕಲ್ ಬಳಿಯ ಸ್ಟೇಡಿಯಂ.
* ವಿಜಯೋತ್ಸವ ನಿಷೇಧ
ಚುನಾವಣಾ ಫಲಿತಾಂಶದ ದಿನವಾದ ಜೂ. ರಂದು ಬೆಳಗ್ಗೆ 5ರಿಂದ ರಾತ್ರಿ 12ರವರೆಗೆ ವಿಜಯೋತ್ಸವ ಆಚರಣೆ, ಸಿಡಿಮದ್ದು, ಪಟಾಕಿ ಸಿಡಿಸುವುದನ್ನು ದ.ಕ. ಜಿಲ್ಲೆಯಾದ್ಯಂತ ನಿಷೇಧಿಸಿ ಆದೇಶಿಸಲಾಗಿದೆ .