

ಸಿರವಾರ: ಮತದಾರರು ಮತದಾನದಿಂದ ವಂಚಿತರಾಗಬಾರದು. ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆ ಮತದಾನದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಪಂ ಇಒ ಬಸವರಾಜ ಶರಭ್ಯೆ ಹೇಳಿದರು.
.ಅತ್ತನೂರು ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ‘ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವ ಮತದಾರರು ಮತದಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮತ ಚಲಾಯಿಸುವುದು ನಮ್ಮ ಹಕ್ಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮತದಾರರ ಮನೆ ಮುಂದೆ ರಂಗೋಲಿ ಬಿಡಿಸಿ ಮತ ಚಲಾಯಿಸುವಂತೆ ಮನವೊಲಿಸುವ ಪ್ರಯತ್ನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾದರೆ ಪ್ರತಿಯೊಬ್ಬರೂ ಮತ ಚಲಾಯಿಸುವ ವಾಗ್ದಾನ ಮಾಡಬೇಕು. ಅತ್ತನೂರು ಗ್ರಾಮದಲ್ಲಿ ಶೇ.100 ಮತ ಚಲಾವಣೆಗಾಗಿ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮೀನಾಕ್ಷಿ, ನಿಂಗಮ್ಮ, ಸುಧಾ, ರೇಣುಕಾ, ಯಲ್ಲಮ್ಮ, ಮಲ್ಲಮ್ಮರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು. ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯಿತು.