ಅಂಚೆ ಮತಪತ್ರ ಮೂಲಕ ಮತ ಚಲಾಯಿಸಿ

21adarshkdga7
Published on

ಮಡಿಕೇರಿ: ಮತಗಟ್ಟೆಗೆ ಹೋಗಲು ಆಗದಿರುವವರು ಅಂಚೆ ಮತಪತ್ರ ಮೂಲಕ ಮತ ಚಲಾಯಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರಮುಖರ ಜತೆ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿದರು.


ಎಂಬತ್ತು ವರ್ಷ ಮೇಲ್ಪಟ್ಟ ಹಿರಿಯರು, ವಿಶೇಷಚೇತನರು, ಕೋವಿಡ್-೧೯ ಸೋಂಕಿತ/ ಬಾದಿತ ವ್ಯಕ್ತಿಗಳು ಹಾಗೂ ಅಗತ್ಯ ಸೇವೆಯಲ್ಲಿರುವವರು, ಮತಗಟ್ಟೆ ಕೇಂದ್ರಕ್ಕೆ ತೆರಳಲು ಆಗದಿರುವ ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿದೆ. ಈ ಅವಕಾಶವನ್ನು ಅರ್ಹರು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.


ಬೂತ್ ಮಟ್ಟದ ಅಧಿಕಾರಿಗಳು ಮತದಾನ ಕೇಂದ್ರವಿರುವ ಪ್ರದೇಶದಲ್ಲಿ ಚುನಾವಣಾಧಿಕಾರಿ ಒದಗಿಸಿದ ವಿವರಗಳ ಅನುಸಾರ ಎವಿಎಸ್‌ಸಿ, ಎವಿಪಿಡಿ ಮತ್ತು ಎವಿಸಿಓ ಪ್ರವರ್ಗಗಳಲ್ಲಿನ ಗೈರು ಹಾಜರಿ ಮತದಾರರ ಮನೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಮತದಾರರಿಗೆ ನಮೂನೆ ೧೨ಡಿ ಯನ್ನು ವಿತರಿಸುತ್ತಾರೆ. ನಂತರ ಮತದಾರರಿಂದ ನಮೂನೆ ೧೨ಡಿ ಯನ್ನು ಪಡೆಯಲಾಗುವುದು. ಈ ಉದ್ದೇಶಕ್ಕಾಗಿಯೇ ಪ್ರತ್ಯೇಕ ಪಟ್ಟಿ ತಯಾರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.


ಸೆಕ್ಟರ್ ಅಧಿಕಾರಿಗಳು ನಮೂನೆ ೧೨ ಡಿ ಅರ್ಜಿಗಳನ್ನು ವಿತರಿಸುವ ಹಾಗೂ ಸಂಗ್ರಹಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಡಾ.ಬಿ.ಸಿ.ಸತೀಶ ತಿಳಿಸಿದರು.


ಅಂಚೆ ಮತದಾರನು ಒಂದು ಬಾರಿ ಅಂಚೆ ಮತಪತ್ರದ ಮೂಲಕ ಮತಚಲಾಯಿಸುವುದಾಗಿ ಆಯ್ಕೆ ಮಾಡಿಕೊಂಡಲ್ಲಿ, ಯಾವುದೇ ಕಾರಣಕ್ಕೂ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗುವುದಿಲ್ಲ. ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದಂದು, ಆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಚುನಾವಣೆಯು ಮುಕ್ತಾಯಗೊಳ್ಳುವವರೆಗೂ ಆ ಪಟ್ಟಿಯಲ್ಲಿ ಯಾವುದೇ ಹೆಚ್ಚುವರಿ ಸೇರ್ಪಡೆ ಅಥವಾ ತೆಗೆದುಹಾಕುವಿಕೆ ಮಾಡುವುದಿಲ್ಲ ಎಂದರು.


ಕೋವಿಡ್-೧೯ ಪ್ರವರ್ಗಕ್ಕೆ ಸೇರಿದ ಗೈರು ಹಾಜರಿ ಮತದಾರರ ಸಂದರ್ಭದಲ್ಲಿ ಅಂಚೆ ಮತದಾನಕ್ಕಾಗಿ ನಮೂನೆ-೧೨ಡಿ ಯನ್ನು ಅನುಮೋದಿಸುವ ಮುಂಚೆ ಚುನಾವಣಾಧಿಕಾರಿಯು ಸಕ್ಷಮ ಪ್ರಾಧಿಕಾರ ನೀಡಿದ ಪ್ರಮಾಣ ಪತ್ರ ಪರಿಶೀಲಿಸಲಿದ್ದಾರೆ. ಚುನಾವಣಾಧಿಕಾರಿ ಮತದಾರರ ಪಟ್ಟಿ ಗುರುತು ಮಾಡಿದ ಪ್ರತಿಯನ್ನು ಅವರ ಹೆಸರಿನ ಮುಂದೆ ಪಿಬಿ(ಪೊಸ್ಟಲ್ ಬ್ಯಾಲೆಟ್) ಎಂದು ನಮೂದಿಸುತ್ತಾರೆ. ಅಂಚೆ ಮತಪತ್ರವನ್ನು ನೀಡಲಾದ ಮತದಾರನಿಗೆ ಮತದಾನ ಕೇಂದ್ರದಲ್ಲಿ ಮತ ಹಾಕಲು ಅನುಮತಿ ನೀಡುವುದಿಲ್ಲ ಎಂದರು.


ಕಾಂಗ್ರೆಸ್ ಪಕ್ಷದ ತೆನ್ನಿರಾ ಮೈನಾ ಮತ್ತು ಬಿಜೆಪಿಯ ಸತೀಶ್ ಮಾತನಾಡಿ, ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ಕೈಜೋಡಿಸಲಾಗುವುದು. ೮೦ ವರ್ಷ ಮೇಲ್ಪಟ್ಟವರು ಹಾಗೂ ಇತರರನ್ನು ಸಂಪರ್ಕಿಸಿ ಮತಗಟ್ಟೆಗೆ ತೆರಳಲು ಅಸಾಧ್ಯವಾಗಿರುವವರಿಗೆ ಅಂಚೆ ಮತಪತ್ರ ಪಡೆದು ಮತದಾನ ಮಾಡಲು ಉತ್ತೇಜಿಸಲಾಗುವುದು ಎಂದು ಹೇಳಿದರು.


ಕೊಡಗು ಜಿಲ್ಲೆಯ ಹಲವು ಹಾಡಿಯ ಕುಟುಂಬಗಳು ಇನ್ನೂ ಕೂಡ ಮತದಾರರ ಗುರುತಿನ ಚೀಟಿ ಪಡೆದಿಲ್ಲ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ತೆನ್ನಿರ ಮೈನಾ ಕೋರಿದರು.


ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಪ್ರತಿಕ್ರಿಯಿಸಿ, ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎರಡು ಬಾರಿ ಮನೆ ಮನೆ ಸಮೀಕ್ಷೆ ಮಾಡಲಾಗಿದೆ. ಈ ಹಿಂದೆ ನವೆಂಬರ್ ತಿಂಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಂಬಂಧ ಅಭಿಯಾನ ನಡೆದಿತ್ತು. ಈಗಲೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡದಿರುವವರು, ಹೆಸರು ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು.


ಹಾಡಿಗಳಲ್ಲಿ ಈಗಾಗಲೇ ಎರಡು ಬಾರಿ ಮನೆ ಮನೆಗೆ ಭೇಟಿ ನೀಡಿ ೧೦೦೨ ಕ್ಕೂ ಹೆಚ್ಚು ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇನ್ನೂ ಯಾರಾದರೂ ೧೮ ವರ್ಷ ಮೇಲ್ಪಟ್ಟವರು ಬಿಟ್ಟು ಹೋಗಿದ್ದಲ್ಲಿ ಹತ್ತಿರದ ಬಿಎಲ್‌ಒಗಳನ್ನು ಅಥವಾ ವೋಟರ್ ಹೆಲ್ಫ್‌ಲೈನ್ ಆ್ಯಪ್ ಮೂಲಕ ಹೆಸರು ನೋಂದಾಯಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.


ಸಭೆಯಲ್ಲಿ ಗುಲಾಬಿ(ಜೆಡಿಎಸ್), ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಕ್, ಚುನಾವಣಾ ತಹಶೀಲ್ದಾರ್ ರವಿಶಂಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net