

ವಿಜಯಪುರ: ನಮ್ಮ ರಕ್ಷಣೆಗಾಗಿ, ದೇಶ ಉಳಿವಿಗಾಗಿ ನಮ್ಮ ಮತ ಬಿಜೆಪಿಗೆ ಹಾಕುವ ಕಾಲ ಬಂದಿದೆ. ನಮ್ಮವರು, ನಮ್ಮ ಮನೆಗಳು ಉಳಿಯಬೇಕೆಂದರೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಾಗೂ ನಗರ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯಿಂದ ಯಾರನ್ನು ಕೇಳಿದರೂ ಮೋದಿಗೆ ಮತ ಎನ್ನುತ್ತಾರೆ. ಯಾವ ಗ್ಯಾರಂಟಿಯೂ ಬೇಡ, ನಮಗೆ ಮೋದಿಯವರೇ ಗ್ಯಾರಂಟಿ ಎನ್ನುತ್ತಿದ್ದಾರೆ. ದೇಶ ಉಳಿಯಬೇಕೆಂದರೆ, ಸನಾತನ ಧರ್ಮ ಉಳಿಯಬೇಕೆಂದರೆ ದೇಶಕ್ಕೆ ಮೋದಿಯವರು ಅನಿವಾರ್ಯ. ಎಲ್ಲರೂ ಕಂಕಣ ಬದ್ಧರಾಗಿ ಮೋದಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಲು ಸಲಹೆ ನೀಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಯೇ ಕಾಂಗ್ರೆಸ್ ಮೂಲಮಂತ್ರವಾಗಿದೆ. ಅವರ ಪ್ರಣಾಳಿಕೆಯಲ್ಲಿ ಕಾಶ್ಮೀರದ 370 ಕಲಂ ರದ್ದು, ಅಲ್ಪಸಂಖ್ಯಾತರ ರಕ್ಷಣೆಗಾಗಿ ಮತ್ತೊಂದು ಹೊಸ ಕಾನೂನು ಜಾರಿ, ಅಗ್ನಿಪಥ್ ರದ್ದು ಹೀಗೆ ಪ್ರತಿಯೊಂದು ದೇಶ ಹಾಳುಗೆಡುವ ಉದ್ದೇಶಗಳನ್ನೆ ಹೊಂದಿವೆ. ಇವರಿಗೆ ದೇಶದ ಸುರಕ್ಷತೆ, ಹಿಂದೂ ಧರ್ಮ, ದಲಿತರ ರಕ್ಷಣೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ಕಾಂಗ್ರೆಸ್‌ನವರು ಎಂದೂ ದೇಶದ ಹಿತ, ಕಲ್ಯಾಣದ ಬಗ್ಗೆ ಯೋಚನೆಯೇ ಮಾಡಲಿಲ್ಲ. ಬರೀ ಕುಟುಂಬದ ಸ್ವಾರ್ಥ ಬಯಸಿದರು. ಈಗ ಪ್ರಾಮಾಣಿಕತೆ ಹಾಗೂ ಅಭಿವೃದ್ಧಿ ಕಾಳಜಿ ಹೊಂದಿರುವ ಪ್ರಧಾನಿ ಮೋದಿಯವರ ಪ್ರಭಾವ ಸಹಿಸಲಾಗದೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಮತಕ್ಷೇತ್ರ ಪ್ರಭಾರಿ ವಿವೇಕಾನಂದ ಡಬ್ಬಿ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಮಾತನಾಡಿದರು. ಮುಖಂಡ ದಯಾಸಾಗರ ಪಾಟೀಲ, ಬಸವರಾಜ ಬೈಚಬಾಳ, ಸ್ವಪ್ನಾ ಕಣಮುಚನಾಳ, ಲಕ್ಷ್ಮಿ ಕನ್ನೊಳ್ಳಿ ಮತ್ತಿತರರಿದ್ದರು. ಪಾಪುಸಿಂಗ್ ರಜಪೂತ ನಿರೂಪಿಸಿದರು.