

ಶಿವಮೊಗ್ಗ: ಮತಗಳ್ಳತನ ಮಾಡಿ ಪ್ರಜಾಪ್ರಭುತ್ವವನ್ನು ಕೊಲೆಗೈದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲ ತಾಲೂಕುಗಳ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಮುಖ್ಯ ಬಸ್ ನಿಲ್ದಾಣದ ಎದುರು ಸೋಮವಾರ ಮತಗಳವು ವಿರುದ್ಧದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಹಕ್ಕನ್ನು ಉಳಿಸುವುದು ನಾಗರಿಕರ ಕೆಲಸ. ನಮ್ಮ ವೋಟು- ನಮ್ಮ ಹಕ್ಕು- ನಮ್ಮ ಅಧಿಕಾರ. ಅದು ನಮ್ಮ ಕೈಯಲ್ಲೇ ಇರಬೇಕು. ಈ ಬಗ್ಗೆ ಕಾಂಗ್ರೆಸ್‌ನಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿದೆ. ಜಿಎಸ್‌ಟಿ ಬಗ್ಗೆ ಮೊದಲು ಪ್ರಸ್ತಾಪ ಮಾಡಿದ್ದು ಯುಪಿಎ ಸರ್ಕಾರ. ಆಧಾರ್ ಕಾರ್ಡ್ ಮೊದಲು ಪರಿಚಯಿಸಿದ್ದು ಯುಪಿಎ. ಆದರೆ ಆಗ ಅದೆಲ್ಲವನ್ನೂ ವಿರೋಧಿಸಿದ್ದ ಬಿಜೆಪಿ ತಾನು ಅಧಿಕಾರಕ್ಕೆ ಬಂದ ಮೇಲೆ ಅದನ್ನೇ ನಕಲು ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಂಹಸ್ವಪ್ನವಾಗಿದ್ದಾರೆ. ದೇಶ ಒಗ್ಗೂಡಲು ರಾಹುಲ್ ಕಾರಣೀಭೂತರಾಗಿದ್ದಾರೆ. ಇದಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದಾರೆ. ಈಗ ಮತಗಳ್ಳತನದ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ ಎಂದು ಹೇಳಿದರು.
ಎಂಎಲ್‌ಸಿ ಮಂಜುನಾಥ್ ಭಂಡಾರಿ ಮಾತನಾಡಿ, ಬೆಂಗಳೂರಿನ ಮಹದೇವಪುರ ಕ್ಷೇತ್ರವೊಂದರಲ್ಲೇ ಒಂದು ಲಕ್ಷ ಮತಗಳು ಮಾಯವಾಗಿವೆ. ಆಳಂದ ಕ್ಷೇತ್ರದಲ್ಲಿ 6 ಸಾವಿರ ಮತಗಳು ಮಾಯವಾಗಿದೆ. ಇದೆಲ್ಲವೂ ಬಿಜೆಪಿಯವರ ಮತಗಳ್ಳತನಕ್ಕೆ ಸ್ಪಷ್ಟ ಸಾಕ್ಷಿ ಎಂದರು.
ಬಿಜೆಪಿ ನಾಯಕರ ವಿರುದ್ಧ ಮಾತನಾಡಿದರೆ ಕೇಂದ್ರ ಸರ್ಕಾರ ಐಟಿ, ಇಡಿ ಬಳಸಿ ಬಾಯಿಮುಚ್ಚಿಸುವ ಕೆಲಸ ಮಾಡುತ್ತಿದೆ. ಜನತೆಯ ಹಕ್ಕನ್ನು ಕೇಂದ್ರ ಸರ್ಕಾರ ಕಸಿದಿದೆ. ಮತಗಳ್ಳತನ ಮಾಡಿದ ದಾಖಲೆಯನ್ನು ರಾಹುಲ್ ಗಾಂಧಿ ಹಲವು ಬಾರಿ ಬಹಿರಂಗಪಡಿಸಿ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ. ಆದರೆ ಚುನಾವಣಾ ಆಯೋಗ ಮತ್ತೆ ಮತ್ತೆ ಸಾಕ್ಷೃ ಕೇಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಅಧ್ಯಕ್ಷ ಎನ್.ರಮೇಶ್, ಪ್ರಮುಖರಾದ ಜಿ.ಡಿ.ಮಂಜುನಾಥ್ ಇತರರಿದ್ದರು.