ಮತ ಜಾಗೃತಿಗೆ ಬಣ್ಣದ ಚಿತ್ತಾರ!

Vote Awareness Color Chittar
ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಪಂ ಮತಗಟ್ಟೆ ಸಂಖ್ಯೆ-181ರಲ್ಲಿ ಜಾನಪದ ಸಂಸ್ಕೃತಿ ಬಿಂಬಿಸುವ ಚಿತ್ರಕಲೆ ಬಿಡಿಸಿರುವುದು.
Published on

ಬೆಳಗಾವಿ: ಜಿಲ್ಲಾ ಸ್ವೀಪ್ ಸಮಿತಿಯು ಮತಗಟ್ಟೆಗಳಲ್ಲಿ ಚಿತ್ರಕಲೆ ಮತ್ತು ಜಾನಪದ ಸಂಸ್ಕೃತಿ ಬಿಂಬಿಸುವ ಭಿತ್ತಿಚಿತ್ರ ಬಿಡಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಮತದಾನದತ್ತ ಆಕರ್ಷಿಸುತ್ತಿದೆ.

ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಉಪಕ್ರಮ ಅನುಸರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 8 ಮತಗಟ್ಟೆಗಳನ್ನು ಗುರುತಿಸಿ ಚಿತ್ರಕಲೆ, ಜಾನಪದ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬಿಡಿಸಿ, ಮತದಾರರನ್ನು ಮತಗಟ್ಟೆಗಳತ್ತ ಆಕರ್ಷಿಸಲಾಗುತ್ತಿದೆ. ಒಟ್ಟಾರೆ ಜಿಲ್ಲಾದ್ಯಂತ 150ರಿಂದ 200 ಮತಗಟ್ಟೆಗಳಲ್ಲಿ ಮತ ಜಾಗೃತಿಗಾಗಿ ಪೇಂಟಿಂಗ್ ಹಾಗೂ ವಿವಿಧ ಕಲಾಕೃತಿಗಳನ್ನು ಚಿತ್ರಿಸಲಾಗಿದೆ. ಮತಗಟ್ಟೆಗಳ ಗೋಡೆಗಳಲ್ಲಿ ಮತದಾನದ ಮಹತ್ವದ ಬರಹಗಳ ಜತೆಗೆ ಮತಗಟ್ಟೆಗಳಲ್ಲಿನ ಕಾರ್ಯವೈಖರಿ, ಮತದಾರರಿಗೆ ಇರಬೇಕಾದ ಸಭ್ಯತೆ, ಅಂಗವಿಕಲರಿಗಾಗಿ ಒದಗಿಸುವ ಸೌಲಭ್ಯಗಳ ಚಿತ್ರಗಳನ್ನು ಬಿಡಿಸಲಾಗಿದೆ. ಚಿತ್ರಕಲಾ ಶಿಕ್ಷಕರು ಹಾಗೂ ಸ್ಥಳೀಯ ಕಲಾವಿದರ ಸಹಕಾರ ಪಡೆದು ಮತಗಟ್ಟೆಗಳಲ್ಲಿ ಚಿತ್ರಕಲೆಗಳನ್ನು ಬಿಡಿಸಲಾಗಿದೆ.

ಮತದಾನಕ್ಕೆ 4,500 ಸ್ವಯಂ ಸೇವಕರು: ಅಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಸಖಿ ಮತಗಟ್ಟೆಗಳು, ಯುವ ಮತದಾರರ ಬೂತ್ ಹಾಗೂ ಅಂಗವಿಕಲರ ಮತಗಟ್ಟೆಗಳನ್ನೂ ತೆರೆಯಲಾಗಿದೆ. ಜಿಲ್ಲೆಯಾದ್ಯಂತ 4,500 ಸ್ವಯಂ ಸೇವಕರನ್ನು ಮತದಾನದ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುತ್ತಿದೆ. ಅದಕ್ಕೆ ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮತ್ತು ರಾಜಕೀಯೇತರ ಸಂಘ-ಸಂಸ್ಥೆಗಳ ಸದಸ್ಯರನ್ನು ಗುರುತಿಸಲಾಗಿದೆ. ಅವರು ಮತಗಟ್ಟೆಗಳ ಬಗ್ಗೆ ಮತದಾರರಿಗೆ ಗೈಡ್ ಮಾಡುತ್ತಾರೆ. ವಯೋವೃದ್ಧರಿಗೆ ಮತದಾನ ಮಾಡುವುದಕ್ಕೆ ಸಹಾಯ ಮಾಡುತ್ತಾರೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಮತದಾನಕ್ಕೆ ಸಂದೇಶ ರವಾನೆ

ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಮತದಾರರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗದಿಂದ ಪ್ರತಿ ಮತದಾರರಿಗೆ ಮತದಾನ ಮಾಡುವಂತೆ ಫೋನ್ ಕರೆಗಳು ಹೋಗಿವೆ. ಜಿಲ್ಲೆಯಲ್ಲಿ ಬಿಎಲ್‌ಒಗಳ ಮೂಲಕ ವೋಟರ್ ಸ್ಲೀಪ್‌ಗಳನ್ನು ಶೇ. 100 ವಿತರಣೆ ಮಾಡಲಾಗಿದೆ.

ಮತಗಟ್ಟೆಗಳಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ನೆರವಾಗುವರು. ಪ್ರತಿ ಮತಗಟ್ಟೆಗಳಲ್ಲಿ ಮತದಾರರ ಜಾಗೃತಿ ಬೂತ್ ಹಾಕಿದ್ದಾರೆ. ಅಲ್ಲಿ ಬಿಎಲ್‌ಒ ಇರುತ್ತಾರೆ. ಮತದಾನ ಹೇಗೆ ಮಾಡಬೇಕು ಎಂದು ಅರಿವು ಮೂಡಿಸುತ್ತಾರೆ. ವಿವಿ ಪ್ಯಾಟ್ ಇತ್ಯಾದಿ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಬಾರಿ ಈ ಎಲ್ಲ ಅಂಶಗಳನ್ನು ಹೆಚ್ಚು ಫೋಕಸ್ ಮಾಡಿದ್ದೇವೆ. ವೋಟರ್ ಗೈಡ್ ಎಂಬ ಕೈಪಿಡಿಯನ್ನು ಈಗಾಗಲೇ ನೀಡಿದ್ದೇವೆ. ಮತದಾನ ಹೆಚ್ಚಿಸುವುದಕ್ಕೆ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ.| ಹರ್ಷಲ್ ಭೋಯರ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿಲ್ಲಾ ಸ್ವೀಪ್ ಸಮಿತಿಯು ಕಡಿಮೆ ಮತದಾನವಾದ ಕಡೆಗಳಲ್ಲಿ ವಿಶೇಷ ಜಾಗೃತಿ ಮೂಡಿಸಿದೆ. ಜಿಲ್ಲಾಡಳಿತವು ಮತದಾನ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮ ರೂಪಿಸಿದೆ. ಮೇಣದ ಬತ್ತಿ ಮೆರವಣಿಗೆ, ಬೈಕ್ ರ‌್ಯಾಲಿ, ಬೀದಿ ನಾಟಕ ಮೂಲಕ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಿದೆ.ಮೇ 10ರಂದು ಎಲ್ಲರೂ ಮತಗಟ್ಟೆಗಳಿಗೆ ಬಂದು ತಪ್ಪದೆ ಮತ ಚಲಾಯಿಸಬೇಕು.| ನಿತೇಶ ಪಾಟೀಲ, ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಿ ಹಕ್ಕನ್ನು ಚಲಾಯಿಸಬೇಕು. ಅಂಗವಿಕಲರು ತಮ್ಮ ನ್ಯೂನತೆ ಮರೆತು ಮತದಾನ ಮಾಡಬೇಕು. ಮತ ಚಲಾವಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಎಲ್ಲರೂ ತಪ್ಪದೆ ಮತದಾನದಲ್ಲಿ ಪಾಲ್ಗೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು.| ರಾಘವೇಂದ್ರ ಅನ್ವೇಕರ, ಜಿಲ್ಲಾ ಸ್ವೀಪ್ ಸಮಿತಿ ರಾಯಭಾರಿ

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net