

ಮಡಿಕೇರಿ: ಪ್ರಜಾಪ್ರಭುತ್ವದಲ್ಲಿ ಸರ್ಕಾರ, ಸಮಾಜ ಪ್ರಜೆಗಳಾಗಿದ್ದು, ಮತದಾನದ ಮೂಲಕ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಸರ್ಕಾರ ರಚಿಸಲು ಅರ್ಹರೆಲ್ಲರೂ ಮತದಾನ ಮಾಡುವಂತಾಗಬೇಕು. ಇದರಿಂದ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ರಘು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮತದಾನ ಮಾಡುವುದು ಪವಿತ್ರ ಕಾರ್ಯವಾಗಿದ್ದು, ಮತವನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬಾರದು. ಮಾರಿಕೊಂಡಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಲು ಆಗುವುದಿಲ್ಲ. ಅದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತೀ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವ್ಯವಸ್ಥೆ ಬಗ್ಗೆ ಅತೃಪ್ತಿ, ಅಸಮಾದಾನ ವ್ಯಕ್ತಪಡಿಸುತ್ತೇವೆ. ಆದರೆ ನಮ್ಮ ತಪ್ಪುಗಳ ಆತ್ಮವಲೋಕನ ಮಾಡಿಕೊಳ್ಳುವುದನ್ನು ಮರೆಯುತ್ತೇವೆ. ಇದನ್ನು ಪ್ರತಿಯೊಬ್ಬರೂ ಯೋಚಿಸಬೇಕಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ವಿಶ್ವದಲ್ಲಿಯೇ ಭಾರತಕ್ಕೆ ಉತ್ತಮ ಸಂವಿಧಾನ ನೀಡಿದ್ದು, ಧ್ವನಿ ಇಲ್ಲದವರಿಗೆ ಸಂವಿಧಾನದ ಮೂಲಕ ಧ್ವನಿ ನೀಡಿದ್ದಾರೆ. ಅದನ್ನು ಸರಿಯಾಗಿ ಮತದಾನದ ಮೂಲಕ ಬಳಸಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಮತ ಹಕ್ಕು ಒಂದು ಸಾಧನೆ ಎಂಬುದನ್ನು ಮರೆಯಬಾರದು ಎಂದರು.
ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟವರೆಲ್ಲರೂ ಮತದಾನದ ಗುರುತಿನ ಚೀಟಿ ಪಡೆದು, ಮತಹಕ್ಕು ಚಲಾಯಿಸಬೇಕು. ಜಿಲ್ಲೆಯಲ್ಲಿ ಶೇಕಡವಾರು ಮತದಾನ ಹೆಚ್ಚಳ ಆಗಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಮಾತನಾಡಿ, ಭವ್ಯ ಭಾರತ ನಿರ್ಮಾಣಕ್ಕೆ ಮತದಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಭಾರತ ಸಂವಿಧಾನವು ಅತ್ಯುತ್ತಮ ಪ್ರಜಾಪ್ರಭುತ್ವದ ಆಶಯಗಳನ್ನು ಒಳಗೊಂಡಿದ್ದು, ಸರ್ವರ ಹಿತಾಸಕ್ತಿಯನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ಮತದಾನದ ಮಹತ್ವವನ್ನು ತಿಳಿಯುವ ಮೂಲಕ ಪ್ರತಿಯೊಬ್ಬರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಮಾತನಾಡಿ, ಮತ ಚಲಾಯಿಸುವುದು ಅರ್ಹರ ಜವಾಬ್ದಾರಿಯಾಗಿದೆ. ಮತಹಕ್ಕು ಚಲಾಯಿಸಿ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ದೇಶದ ಅಭಿವೃದ್ಧಿಗೆ ಯುವಜನರ ಕರ್ತವ್ಯ ಹೆಚ್ಚಿನದ್ದಾಗಿದೆ. ಆ ನಿಟ್ಟಿನಲ್ಲಿ ಮತದಾನದ ಮೂಲಕ ನಿರ್ವಹಿಸಬೇಕು ಎಂದರು.
ಮರೂರು ತಿತಿಮತಿ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಮತದಾನದ ಮಹತ್ವ ಕುರಿತ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು. ಭಾರತ ಚುನಾವಣಾ ಆಯೋಗದಿಂದ ಹೊರತಂದಿರುವ ಚುನಾವಣಾ ಜಾಗೃತಿ ಗೀತೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿ ವತಿಯಿಂದ ಮತದಾನದ ಮಹತ್ವ ಕುರಿತು ಹೊರತರಲಾಗಿರುವ ವಿಡಿಯೋ ಪ್ರದರ್ಶನ ಮಾಡಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಉದ್ಘಾಟಿಸಿದರು. ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಕಾನೂನು ಸಲಹೆಗಾರ ಲೋಕೇಶ್ ಕುಮಾರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ(ಪ್ರಭಾರ) ಎಂ.ಎನ್.ರವಿಶಂಕರ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಇತರರು ಇದ್ದರು.