ಮತದಾನ ಮಾಡಿ ಗರ್ವ ಪಡಿ: ಖಾಸಗಿ ಕಂಪನಿಯ ಸಿಬ್ಬಂದಿಗೆ ನಗರ ಚುನಾವಣಾಧಿಕಾರಿ ಮನವಿ

election pludge
Published on

ಬೆಂಗಳೂರು: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಂಡು ದೇಶಕ್ಕೆ ಗರ್ವ ತರುವ ಕೆಲಸ ಮಾಡೋಣ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಖಾಸಗಿ ಕಂಪನಿಯ ಸಿಬ್ಬಂದಿಗಳಲ್ಲಿ ಮನವಿ ಮಾಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಬಳ್ಳಾರಿ ರಸ್ತೆಯ ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವೀಸಸ್ ಕಂಪನಿಯ ಸಭಾಂಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಮತದಾನ ಹಕ್ಕನ್ನು ಹೊಂದಿಲ್ಲದೇ ಇರುವವರು ಮತದಾನದ ದಿನ ವೇತನ ಸಹಿತ ರಜೆ ನೀಡಲಾಗಿದ್ದು, ಎಲ್ಲರೂ ತಮ್ಮ-ತಮ್ಮ ಊರುಗಳಿಗೆ ತೆರಳಿ ತಪ್ಪದೆ ಮತದಾನ ಮಾಡಬಹುದಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಮತದಾನ ಶೇಕಡವಾರು ಪ್ರಮಾಣ ಹೆಚ್ಚಳವಾಗಲಿದೆ ಎಂಬ ಭರವಸೆ ಇತ್ತು. ಆದರೆ, ಶೇ.54 ಮಾತ್ರ ಮತ ಚಲಾವಣೆಯಾಗಿ ಆ ಭರವಸೆ ಹುಸಿಯಾಯಿತು. ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಮತದಾನ ಮಾಡಿದರೆ ಮಾತ್ರ ಶೇಕಡವಾರು ಮತ ಪ್ರಮಾಣ ಹೆಚ್ಚಳವಾಗುತ್ತದೆ. ಹಾಗಾಗಿ ಎಲ್ಲರೂ ತಪ್ಪದೆ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಲು ಮರೆಯಬೇಡಿ ಎಂದು ವಿನಂತಿಸಿದರು.

ಕ್ಯೂ ಸಿಸ್ಟಂ ತಂತ್ರಾಂಶ ಅಳವಡಿಕೆ:

ಮತದಾರರ ಅನುಕೂಲಕ್ಕಾಗಿ ಈ ಬಾರಿ ನಗರದಲ್ಲಿ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆಯಾ ಮತಗಟ್ಟೆಗಳ ಬಳಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಮತಗಟ್ಟೆಗಳಲ್ಲಿ ಕ್ಯೂ ಸಿಸ್ಟಂ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಅದರ ಮೂಲಕ ನಿಮ್ಮ ಮತಗಟ್ಟೆಗಳಲ್ಲಿ ಸರತಿ ಸಾಲು ಎಷ್ಟಿದೆ ಎಂಬುದನ್ನು ಮನೆಯಿಂದಲೇ ನೋಡಿಕೊಂಡು ಪೋಲಿಂಗ್ ಬೂತ್‌ಗೆ ತೆರಳಿ ಮತ ಚಲಾಯಿಸಬಹುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಡೆಡಿಕೇಟೆಡ್ ಎಇಆರ್‌ಒ (ಸ್ವೀಪ್) ಡಾ. ಮಮತಾ, ಎಲ್ ಆ್ಯಂಡ್ ಟಿ ಕಂಪನಿಯ ಪ್ರತಿನಿಧಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net