

ಮುಧೋಳ: ಈ ಹಿಂದೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನ ಪ್ರತಿಗಳನ್ನು ಸುಟ್ಟುಹಾಕಿದವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ತಕ್ಕ ಉತ್ತರ ನೀಡಬೇಕೆಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನಗರದ ಬಸವಪ್ರಭು ಕತ್ತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಹೇಳಿದ ಅಧಿಕಾರದ ಕೀ ರಾಜಕೀಯದಲ್ಲಿದೆ. ಪ್ರತಿಯೊಬ್ಬರಿಗೂ ರಾಜಕೀಯದ ಅವಶ್ಯಕತೆ ಇದೆ. ನಮ್ಮ ಬೇಕುಬೇಡಿಕೆಗಳ ಕಾಯ್ದೆ ಕಾನೂನು ತರುವಲ್ಲಿ ರಾಜಕಾರಣ ಅತಿ ಮುಖ್ಯವಾಗಿದೆ. ನಾವೆಲ್ಲರೂ ಮತದಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಅವರು ತಿಳಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ನಿಗಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಎಂದೂ ಆಗದ ಸಾಲಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ, ದೀನದಲಿತರ ಉದ್ಧಾರಕ್ಕಾಗಿ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ, ಕಾಂಟ್ರಾಕ್ಸ್‌ನಲ್ಲಿಯೂ ಮೀಸಲಾತಿ ಜಾರಿಗೆ ತಂದರು. ನಮ್ಮ ನಡೆ ನುಡಿಗಳೆಲ್ಲ ಅಭಿವೃದ್ಧಿ ಕಡೆಗಿರಬೇಕು. ನಿಮ್ಮ ಅಭಿವೃದ್ಧಿಗೆ ನಾನೂ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್‌ಸಿ, ಎಸ್‌ಟಿ ಸಾಲ ಸೌಲಭ್ಯಗಳನ್ನು ನೀಡುವ ಸಬ್ಸಿಡಿಯಲ್ಲಿ ಶೇ. 50ರಷ್ಟು ಕಡಿಮೆ ಮಾಡಿದರು. ಕೋಮುವಾದಿ ಬಿಜೆಪಿ ಸರ್ಕಾರ ಹಲವಾರು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುವುದು ಸಂವಿಧಾನಕ್ಕೆ ಎಸಗುತ್ತಿರುವ ಅಪಚಾರವಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರಿಗೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು.
ಮುಧೋಳ ಎಸ್‌ಸಿ ಘಟಕದ ಅಧ್ಯಕ್ಷ ಪ್ರಕಾಶ ತಳಗೇರಿ, ಲೋಕಾಪುರದ ಗೋವಿಂದಪ್ಪ ದಾಸರ, ಸಿದ್ದಪ್ಪ ಹೊಸಕೋಟಿ, ದುರಗಪ್ಪ ಕಾಳಮ್ಮನವರ, ನಾಮನಿರ್ದೇಶಕರಾದ ಹನುಮಂತ ಪೂಜಾರಿ, ಯಶವಂತ ಮಾದರ, ಸದಾಶಿವ ಮೇತ್ರಿ, ಯಮನಪ್ಪ ದೊಡಮನಿ, ನಗರಸಭೆ ಸದಸ್ಯರಾದ ಸತೀಶ ಗಾಡಿ, ಭೀಮಶಿ ಮೇತ್ರಿ ಇತರರಿದ್ದರು. ಇದೇ ವೇಳೆ ಬೆಳಗಲಿಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.