ಮಹಿಳಾ ಮತದಾರದ್ದೇ ಪ್ರಾಬಲ್ಯ

Vote
Published on

ಮಡಿಕೇರಿ:

ಕೊಡಗಿನಲ್ಲಿ ಮಹಿಳಾ ಮತದಾರರೇ ಮತ್ತೆ ಪ್ರಾಬಲ್ಯ ಮೆರೆದಿದ್ದಾರೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಪುರುಷರಿಗಿಂತೂ ಸ್ತೀಯರ ಮತಗಳೇ ಹೆಚ್ಚು ಪ್ರಮಾಣದಲ್ಲಿ ಕಂಡುಬAದಿದೆ. ಸೋಮವಾರ (ಜ.06) ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಹಾಗಾಗಿ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸಲಿದ್ದು, ರಾಜಕೀಯ ಪಕ್ಷಗಳು ಹೆಚ್ಚಿನ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಯೋಚಿಸುವ ಅನಿವಾರ್ಯತೆ ಎದುರಾಗಿದೆ.

ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ ಎನ್ನುವ ಮಾತುಗಳ ಮಧ್ಯೆ ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಸೋಮವಾರ (ಜ.06) ಬಿಡುಗಡೆ ಮಾಡಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಿದೆ ಚುನಾವಣಾ ಆಯೋಗದ ಮಾಹಿತಿ.

ಚುನಾವಣಾ ಆಯೋಗದ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 5.52 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ 2.75 ಕೋಟಿ ಪುರುಷರು ಮತ್ತು 2.76 ಕೋಟಿ ಮಹಿಳೆಯರಿದ್ದಾರೆ. 31 ಜಿಲ್ಲೆಗಳ ಪೈಕಿ 26 ಜಿಲ್ಲೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಇದೆ. ಮಹಿಳಾ ಮತದಾರರು ಹೆಚ್ಚು ಇರುವ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದಾಗಿದೆ.

2011ರ ಜನಗಣತಿ ಪ್ರಕಾರ 5,54,519ರಷ್ಟು ಜನಸಂಖ್ಯೆ ಇರುವ ಕೊಡಗಿನಲ್ಲಿ 1000 ಗಂಡಸರಿಗೆ 1019 ಮಹಿಳೆಯರ ಲಿಂಗಾನುಪಾತ ಇದೆ. ಇದರಿಂದಾಗಿ ಸಹಜವಾಗಿ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದೀಗ ಬಿಡುಗಡೆ ಆಗಿರುವ ಅಂತಿಮ ಮತದಾರರ ಪಟ್ಟಿಯನ್ನೂ ಮಹಿಳಾ ಮತದಾರರ ಪಾರಮ್ಯ ಕಾಣಬಹುದಾಗಿದೆ.

ಒಟ್ಟು 552 ಮತಗಟ್ಟೆಗಳು ಇರುವ ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ 4,73,376 ಮತದಾರರು ಜಿಲ್ಲೆಯಲ್ಲಿ ಇದ್ದಾರೆ. ಇದರಲ್ಲಿ ಪುರುಷ ಮತದಾರರ ಸಂಖ್ಯೆ 2,32,042 ಆದರೆ ಮಹಿಳಾ ಮತದಾರರ ಸಂಖ್ಯೆ 2,42,321. ಅಂದರೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ 10,279 ರಷ್ಟು ಹೆಚ್ಚು ಕಂಡು ಬರುತ್ತಿದೆ. 13 ಇತರ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 275 ಮತಗಟ್ಟೆಗಳಿದ್ದು 1,16,684 ಪುರುಷ ಮತ್ತು 1,23,472 ಮಹಿಳಾ ಮತದಾರರು ಇದ್ದರೆ, 7 ಇತರ ಮತದಾರರು ಇದ್ದಾರೆ. 277 ಮತಗಟ್ಟೆಗಳು ಇರುವ ವಿರಾಜಪೇಟೆ ಕ್ಷೇತ್ರದಲ್ಲಿ 1,15,358 ಪುರುಷ, 1,18,849 ಮಹಿಳಾ ಹಾಗೂ 6 ಇತರ ಮತದಾರರು ಇದ್ದಾರೆ.

ಅ.29ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಗೂ, ಸೋಮವಾರ ಬಿಡುಗಡೆಯಾದ ಅಂತಿಮ ಪತದಾರರ ಪಟ್ಟಿಗೂ ಎರಡೂ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 279 ಮತದಾರರ ಸಂಖ್ಯೆಯಲ್ಲಿ ನಿವ್ವಳ ಬದಲಾವಣೆ ಕಂಡುಬAದಿದೆ. ಕರಡು ಮತದಾರರ ಪಟ್ಟಿ ಪ್ರಕಾರ ಜಿಲ್ಲೆಯ 552 ಮತಗಟ್ಟೆಗಳಲ್ಲಿ ಒಟ್ಟು 4,74,097 ಮತದಾರರು ನೋಂದಣಿ ಆಗಿದ್ದರು. ಇದರಲ್ಲಿ 2,32,042 ಪುರುಷ ಮತದಾರರು ಇದ್ದರೆ, 2,42,041 ಮಹಿಳಾ ಮತದಾರರು ಇದ್ದರು. 15 ಇತರ ಮತದಾರರ ಹೆಸರು ನೋಂದಣಿ ಆಗಿತ್ತು. 275 ಮತಗಟ್ಟೆಗಳನ್ನು ಹೊಂದಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2,40,247 ಮತದಾರರಿದ್ದು, ಇದರಲ್ಲಿ 1,16,787 ಪುರುಷ, 1,23,452 ಮಹಿಳಾ ಹಾಗೂ 8 ಮತದಾರರು ನೋಂದಣಿ ಆಗಿದ್ದರು. 277 ಮತಗಟ್ಟೆಗಳಿರುವ ವಿರಾಜಪೇಟೆ ಕ್ಷೇತ್ರದಲ್ಲಿ 2,33,850 ಒಟ್ಟು ಮತದಾರರಿದ್ದು, 1,15,254 ಪುರುಷ, 1,18,589 ಮಹಿಳಾ ಹಾಗೂ 7 ಇತರ ಮತದಾರರು ಇದ್ದರು.

ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ನಡೆಯುತ್ತಿದ್ದು, ಈಗಲೂ ಸೇರ್ಪಡೆ, ಬದಲಾವಣೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದಿನ ಮತದಾರರ ಪಟ್ಟಿ ಪರಿಷ್ಕರಣೆಯ ಅವಧಿಯಲ್ಲಿ 18-19 ವಯೋಮಾನದ 490 ಹೊಸ ಮತದಾರರು ಸೇರ್ಪಡೆ ಆಗಿದ್ದಾರೆ. ಈ ಸಂಬAಧ ನಮೂನೆ 6ರಲ್ಲಿ 500 ಅರ್ಜಿಗಳು ಬಂದಿದ್ದವು. ಈ ಪೈಕಿ 10 ಅರ್ಜಿಗಳು ತಿರಸ್ಕೃತಗೊಂಡಿದ್ದವು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 229 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 261 ಹೊಸ ಮತದಾರರು ಮತದರರ ಪಟ್ಟಿಗೆ ಸೇರಿದ್ದಾರೆ.

ಇದನ್ನು ಹೊರತು ಪಡಿಸಿದಂತೆ ಮತದಾರರ ಪಟ್ಟಿಗೆ ಸೇರ್ಪಡೆ ಆಗಲು ನಮೂನೆ 6ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ 678, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ 871 ಸೇರಿದಂತೆ ಒಟ್ಟು 1,549 ಅರ್ಜಿಗಳು ಸ್ವೀಕಾರ ಆಗಿದ್ದವು. ಇದರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ 628, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ 832 ಸೇರಿದಂತೆ ಒಟ್ಟು 1,460 ಅರ್ಜಿಗಳು ಅಂಗೀಕಾರ ಆಗಿವೆ.

ಮತದಾರ ಮೃತಪಟ್ಟಿದ್ದರೆ, ಸ್ಥಳಾಂತರವಾಗಿದ್ದರೆ ಅಥವಾ ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ 7ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ 988, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ 643 ಸೇರಿದಂತೆ 1631 ಅರ್ಜಿಗಳು ಬಂದಿದ್ದವು. ಇದರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ 935, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ 614 ಅರ್ಜಿಗಳು ಸೇರಿ ಒಟ್ಟು 1,549 ಅರ್ಜಿಗಳು ಅಂಗೀಕಾರ ಪಡೆದುಕೊಂಡಿದೆ.

ಮತದಾರರ ಪಟ್ಟಿ ಮತ್ತು ಮತದಾರರ ಚೀಟಿಯಲ್ಲಿ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಅಥವಾ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ 8ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,378 ಅರ್ಜಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,745 ಅರ್ಜಿ ಸ್ವೀಕರಿಸಲಾಗಿತ್ತು. ಈ ಪೈಕಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,216 ಅರ್ಜಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,655 ಸೇರಿ ಒಟ್ಟು 2871 ಅರ್ಜಿಗಳು ಅಂಗೀಕಾರವಾಗಿದ್ದವು.

ಜಿಲ್ಲೆಯಲ್ಲಿ 1,343 ಸೇವಾ ಮತದಾರರು ಕೂಡ ನೋಂದಣಿ ಆಗಿದ್ದಾರೆ. ಈ ಪೈಕಿ 1,284 ಪುರುಷ ಮತದಾರರು ಇದ್ದು, 59 ಮಹಿಳಾ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 594 ಪುರುಷ ಮತ್ತು 25 ಮಹಿಳೆ ಸೇರಿ ಒಟ್ಟು 619 ಸೇವಾ ಮತದಾರರು ಇದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 690 ಪುರುಷ, 34 ಮಹಿಳೆಯರು ಸೇರಿ 724 ಸೇವಾ ಮತದಾರರು ಇದ್ದಾರೆ.

ಸೇವಾ ಅರ್ಹತೆ ಹೊಂದಿರುವವರಿಗೆ ಸೇವಾ ಮತದಾರರು ಎಂದು ಹೇಳಲಾಗುತ್ತದೆ. ಕೇಂದ್ರದ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುವರು ಅಥವಾ

ಸೇನಾ ಕಾಯ್ದೆ 1950(1950ರ49) ಅನ್ವಯವಾಗುವವರು, ಪೊಲೀಸ್ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ರಾಜ್ಯದ ಹೊರಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಅಥವಾ ಭಾರತದ ಹೊರಭಾಗದಲ್ಲಿ ಕೇಂದ್ರ ಸರ್ಕಾರದ ನೌಕರರಾಗಿ ವಿದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಸೇವಾ ಮತದಾರಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಪ್ರಸ್ತುತ ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ನಡೆಯುತ್ತಿದ್ದು, ಈ ಅವಧಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ 6ಎ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ಕೊಡಗಿನಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಲು ಮೂಲ ಕಾರಣ ಶಿಕ್ಷಣ. ಇಲ್ಲಿ ಹುಟ್ಟುವ ಮಗು ಹೆಣ್ಣಾಗಲಿ ಗಂಡಾಗಲಿ ಏಕರೀತಿಯ ಪ್ರಾಶಸ್ತ್ಯ ಪೋಷಕರಿಂದ ಸಿಗುತ್ತದೆ. ಇದಲ್ಲದೆ ನೋಂದಣಿ ಸಂದರ್ಭದಲ್ಲೂ ಸ್ವಯಂಪ್ರೇರಿತರಾಗಿ ಮಹಿಳೆಯರು ಮತದಾರರ ಪಟ್ಟಿಗೆ ಉತ್ಸಾಹದಿಂದ ಸೇರ್ಪಡೆ ಆಗುತ್ತಾರೆ. ಇದೊಂದು ಉತ್ತಮ ಬೆಳವಣಿಗೆ. ಬೇರೆ ಜಿಲ್ಲೆಗಳಿಗೂ ಮಾದರಿ.

ಗೀತಾ ಗಿರೀಶ್, ಆರ್ಥಿಕ ಮತ್ತು ವಿಮಾ ಸಲಹೆಗಾರರು ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net