ಬೆಳಕೇರಾದಲ್ಲಿ 27 ಜನರಿಗೆ ವಾಂತಿ-ಭೇದಿ

IMG-20230730-WA0052
Published on

ಚಿಟಗುಪ್ಪ: ಬೆಳಕೇರಾ ಗ್ರಾಮದಲ್ಲಿ ಉಲ್ಬಣಿಸಿದ ವಾಂತಿ-ಭೇದಿಯಿಂದ ಅಸ್ವಸ್ಥರಾದ 27 ಜನ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಎಂಟು ಜನರನ್ನು ಬೀದರ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಗ್ರಾಮದಲ್ಲಿ ಶನಿವಾರ ವಾಂತಿ-ಭೇದಿ ಕಾಣಿಸಿದ್ದರಿಂದ 10 ಜನ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಸಂಖ್ಯೆ ಅಧಿಕವಾಗಿದ್ದು, 27 ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಗ್ರಾಮದ ಹೊಸ ಬಡಾವಣೆಯಲ್ಲಿ ಹೆಚ್ಚಿನ ಪ್ರಕರಣ ಕಂಡು ಬರುತ್ತಿದ್ದು, ಮೇಲ್ನೋಟಕ್ಕೆ ಕಲುಷಿತ ಕುಡಿಯುವ ನೀರು ಪೂರೈಕೆಯೇ ಕಾರಣ ಎನ್ನಲಾಗಿದೆ.
ಕುಡಿಯುವ ನೀರು ಪರೀಕ್ಷೆಗೆ ರವಾನಿಸಿದ್ದು, ವರದಿ ಬಂದ ನಂತರ ನಿಖರ ಮಾಹಿತಿ ಸಿಗಲಿದೆ ಎಂದು ವೈದ್ಯಾಧಿಕಾರಿ ಡಾ.ವಿಜಯಕುಮಾರ ಹರಿಸ್ಕರ ತಿಳಿಸಿದ್ದಾರೆ. ಎಲ್ಲ ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದು, ಕೆಲವರು ಚೇತರಿಸಿಕೊಂಡಿದ್ದಾರೆ. ಕೆಲವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮದಲ್ಲೂ ಮುಂಜಾಗ್ರತೆ ವಹಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಊರಲ್ಲೇ ಪ್ರಥಮ ಚಿಕಿತ್ಸೆ ನೀಡುವ ಜತೆಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಡಿಎಚ್‌ಒ ಡಾ.ರವಿಕಾಂತ ಸ್ವಾಮಿ, ಡಿಎಸ್‌ಒ ಡಾ.ಶಂಕರರಾವ ಬೊಮ್ಮ, ತಹಸೀಲ್ದಾರ್ ರವೀಂದ್ರ ದಾಮಾ, ತಾಪಂ ಇಒ ಅಕ್ರಮ್ ಪಾಶಾ, ಟಿಎಚ್‌ಒ ಡಾ.ಶಿವಕುಮಾರ ಸಿದ್ಧೇಶ್ವರ ಭೇಟಿ ನೀಡಿ ನಿಗಾ ಇರಿಸಿದ್ದು, ಸೂಕ್ತ ಚಿಕಿತ್ಸೆ ಹಾಗೂ ಗ್ರಾಮದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net