

ಸದೇಶ್ ಕಾರ್ಮಾಡ್ ಮೈಸೂರು
ಮೈಸೂರನ್ನು ಸ್ವಚ್ಛ ಹಾಗೂ ಸುಂದರ ನಗರವಾಗಿ ರೂಪಿಸಲು ನಾಗರಿಕರ ಸಹಕಾರ ಅತ್ಯಂತ ಅಗತ್ಯ. ನಾಗರಿಕರ ಸಹಕಾರ ದೊರೆಯದೆ ಇದ್ದರೆ ನಗರ ಪಾಲಿಕೆ ಎಷ್ಟೇ ಪ್ರಯತ್ನ ನಡೆಸಿದರೂ ಅದು ವ್ಯರ್ಥವಾಗುತ್ತದೆ. ಹಾಗಾಗಿ ನಗರವನ್ನು ಶುಚಿಯಾಗಿಡಲು ನಗರ ಪಾಲಿಕೆಯು ನಾಗರಿಕರ ಸಹಕಾರ ಪಡೆಯಲು ಮುಂದಾಗಿದೆ. ಇದಕೋಸ್ಕರ ಸ್ವಯಂ ಸೇವಕರ ತಂಡ ರಚಿಸಲು ಮುಂದಾಗಿದೆ.
ಮೈಸೂರು 2015 ಮತ್ತು 2016 ಸ್ವಚ್ಛ ಸರ್ವೇಕ್ಷಣೆಯಲ್ಲಿ ದೇಶದ ನಂ.1 ಸ್ವಚ್ಛ ನಗರಿಯಾಗಿ ರೂಪುಗೊಂಡಿತ್ತು. ಈ ಸಾಧನೆಯು ಮೈಸೂರು ನಗರವನ್ನು ಇಡೀ ದೇಶ ತಿರುಗಿ ನೋಡುವಂತೆ ಮಾಡಿತ್ತು. ನಗರವನ್ನು ಶುಚಿಯಾಗಿಡಲು ಆ ಸಂದರ್ಭ ನಗರ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಧರ್ಮ ಗುರುಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ನಾಗರಿಕರು ನೀಡಿದ ಸಹಕಾರವೇ ಪ್ರಮುಖ ಕಾರಣ. ಆದರೆ, ಇಂತಹ ಸಾಂಘಿಕ ಪ್ರಯತ್ನ ವರ್ಷ ಕಳೆದಂತೆ ಕಡಿಮೆಯಾಯಿತು. ಇದರ ಪರಿಣಾಮ ನಗರವು ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದಲ್ಲಿ ನಿರಂತರವಾಗಿ ಹಿನ್ನಡೆ ಅನುಭವಿಸಲು ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ಮತ್ತೆ ಮೈಸೂರು ಸ್ವಚ್ಛ ನಗರಿಯಾಗಿ ರೂಪಿಸಲು ನಗರ ಪಾಲಿಕೆಯು ಸಾರ್ವಜನಿಕರ ಸಹಕಾರವನ್ನು ನಿರೀಕ್ಷಿಸುತ್ತಿದೆ. ಇದಕೋಸ್ಕರ ಪ್ರತಿ ವಾರ್ಡ್‌ಗಳಲ್ಲಿ ನಗರದ ಸ್ವಚ್ಛತೆ ಕುರಿತು ಆಸಕ್ತಿ ತೋರುವ ಜನರನ್ನು ಗುರುತಿಸಿ ಅವರನ್ನು ಸ್ವಚ್ಛತಾ ಸ್ವಯಂಸೇವಕರಾಗಿ ನೇಮಕ ಮಾಡಲು ಪಾಲಿಕೆ ಮುಂದಾಗಿದ್ದು, ಪಾಲಿಕೆಯ ಈ ಪ್ರಯತ್ನಕ್ಕೆ ನಗರದ ಕೆಲವು ನಾಗರಿಕರು ಕೈ ಜೋಡಿಸಲು ಮುಂದೆ ಬಂದಿ ದ್ದಾರೆ.
ಸ್ವಯಂ ಸೇವಕರ ಕರ್ತವ್ಯವೇನು?:
ನಗರದಲ್ಲಿ ಪ್ರತಿನಿತ್ಯ ಪೌರ ಕಾರ್ಮಿಕರು ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುತ್ತಾರೆ. ಆದರೆ, ಕೆಲವರು ಪೌರ ಕಾರ್ಮಿಕರಿಗೆ ತ್ಯಾಜ್ಯ ನೀಡದೆ ತ್ಯಾಜ್ಯವನ್ನು ಖಾಲಿ ನಿವೇಶನಗಳು ಅಥವಾ ಅನೈರ್ಮಲ್ಯ ತಾಂಡವವಾಡುವ ಜಾಗದಲ್ಲಿ ಎಸೆಯುತ್ತಿರುವುದು ಕಂಡು ಬರುತ್ತಿದೆ. ಈ ಕುರಿತು ನಗರ ಪಾಲಿಕೆ ಸಾಕಷ್ಟು ಜಾಗೃತಿ ಮೂಡಿಸಿದರೂ ಹಾಗೂ ದಂಡ ವಿಧಿಸಿದರೂ ಕೆಲವರು ಇನ್ನೂ ಸಹ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿಲ್ಲ. ನಗರ ಪಾಲಿಕೆ ಅಧಿಕಾರಿಗಳಿಗೆ ಎಲ್ಲ ಸಂದರ್ಭದಲ್ಲೂ ಎಲ್ಲ ಕಡೆಗಳಲ್ಲೂ ಕಣ್ಗಾವಲು ಇರಿಸಲು ಸಾಧ್ಯವಿಲ್ಲ. ಅಲ್ಲದೆ, ನಗರದ ಪ್ರತಿಯೊಬ್ಬರನ್ನು ಭೇಟಿಯಾಗಿ ಜಾಗೃತಿ ಮೂಡಿಸಲು ಸಾಧ್ಯವಿಲ್ಲ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ವಾರ್ಡ್‌ನಲ್ಲಿರುವ ಸ್ವಯಂ ಸೇವಕರು ಮಾಡುತ್ತಾರೆ. ಅಲ್ಲದೆ, ಪ್ರತಿ ವಾರ್ಡ್‌ನಲ್ಲಿ ಎಲ್ಲೆಲ್ಲಿ ತ್ಯಾಜ್ಯ ಹರಡಿಕೊಂಡಿದೆ? ಅದಕ್ಕೆ ಪರಿಹಾರವೇನು ಎಂಬ ಸಲಹೆಯನ್ನು ಪಾಲಿಕೆಗೆ ನೀಡಲಿದ್ದಾರೆ. ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಿ ವಾರ್ಡ್ ಅನ್ನು ಸ್ವಚ್ಛ ಹಾಗೂ ಸುಂದರವಾಗಿ ರೂಪಿಸಲು ಅಗತ್ಯ ಸಹಕಾರ ನೀಡುತ್ತಾರೆ. ಸ್ವಯಂ ಸೇವಕರಾಗಿ ನೇಮಕಗೊಳ್ಳುವವರಿಗೆ ನಗರ ಪಾಲಿಕೆಯ ಐಡಿ ಕಾರ್ಡ್ ನೀಡಲಿದ್ದು, ಅವರ ಸೇವೆಯನ್ನು ಗುರುತಿಸಿ ಗೌರವಿಸಲಿದೆ.
ದಂಡ ಪ್ರಯೋಗ:
ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಒಂದೆಡೆ ಮಾಡುತ್ತಿರುವ ನಗರ ಪಾಲಿಕೆ ಮತ್ತೊಂದೆಡೆ ಸ್ವಚ್ಛತೆಗೆ ಸಹಕಾರ ನೀಡದೆ ಇರುವವರಿಗೆ ದಂಡ ವಿಧಿಸುವ ಮೂಲಕ ಅವರನ್ನು ಸರಿದಾರಿಗೆ ತರುವ ಕಾರ್ಯವನ್ನು ಮಾಡುತ್ತಿದೆ. ನಗರದ ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವವರಿಗೆ ನಿರಂತರವಾಗಿ ದಂಡ ವಿಧಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ, ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡದೆ ಇರುವವರಿಗೂ ದಂಡ ವಿಧಿಸಲಾಗುತ್ತಿದೆ.
ಹಸಿರು ನ್ಯಾಯಾಧೀಕರಣದ ನಿರ್ದೇಶನ
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷ ಸುಭಾಷ್ ಬಿ. ಅಡಿ ಇತ್ತೀಚೆಗೆ ನಗರ ಪಾಲಿಕೆಯಲ್ಲಿ ಸಭೆ ನಡೆಸಿ ನಗರದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ಸ್ವಯಂ ಸೇವಕರ ನೇಮಕ ಸೇರಿದಂತೆ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದರು. ಮೈಸೂರನ್ನು ಸ್ವಚ್ಛ ನಗರವಾಗಿ ರೂಪಿಸಲು ಎನ್‌ಜಿಒಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಸ್ವಚ್ಛತೆಯಲ್ಲಿ ಕೈಜೋಡಿಸಲು ಮುಂದೆ ಬರುವ ಸ್ವಯಂ ಸೇವಾ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಐಡಿ ಕಾರ್ಡ್‌ಗಳನ್ನು ನೀಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಹಾಕಬೇಕು. ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಬೇಕು. ಫುಟ್‌ಪಾತ್, ರಸ್ತೆಗಳು ಹಾಗೂ ಚರಂಡಿಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಸ್ವಚ್ಛತೆಗೆ ಸಹಕಾರ ನೀಡದವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಸುಭಾಷ್ ಬಿ. ಅಡಿ ನಿರ್ದೇಶನ ನೀಡಿದ್ದರು. ಅವರ ನಿರ್ದೇಶನ ಪ್ರಕಾರ ಇದೀಗ ನಗರ ಪಾಲಿಕೆ ಸ್ವಯಂ ಸೇವಕರ ನೇಮಕಾತಿಗೆ ಮುಂದಾಗಿದೆ.
ನಗರ ಪಾಲಿಕೆಯಿಂದ ಸ್ವಚ್ಛತಾ ಸ್ವಯಂ ಸೇವಕರ ನೇಮಕಾತಿಗೆ ಈಗಾಗಲೇ ಕ್ರಮ ವಹಿಸಲಾಗಿದ್ದು, ಕೆಲವರು ಆಸಕ್ತಿ ತೋರಿದ್ದಾರೆ. ಪ್ರತಿ ವಾರ್ಡ್‌ಗಳಲ್ಲೂ ಸ್ವಯಂ ಸೇವಕರನ್ನು ನೇಮಕ ಮಾಡಿ ನಗರವನ್ನು ಸಂಪೂರ್ಣ ಸ್ವಚ್ಛ ನಗರವಾಗಿ ರೂಪಿಸಲು ಉದ್ದೇಶಿಸಲಾಗಿದೆ. ಸ್ವಚ್ಛತಾ ಸ್ವಯಂ ಸೇವಕರು ತಮ್ಮ ವಾರ್ಡ್‌ನಲ್ಲಿ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಗೆ ಸಂಬಂಧಿಸಿದಂತೆ ಪೌರ ಕಾರ್ಮಿಕರಿಗೆ, ಅಧಿಕಾರಿಗಳಿಗೆ ಅಗತ್ಯ ಸಲಹೆಗಳನ್ನು ನೀಡುತ್ತಾರೆ. ಅಲ್ಲದೆ, ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಲಿದ್ದಾರೆ.
ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ