ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆ ವೃದ್ಧಿಸಲಿ: ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಮತ

Voluntary blood donation camp Mandya
Published on

ಮಂಡ್ಯ: ದಿನದಿಂದ ದಿನಕ್ಕೆ ರಕ್ತಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆ ವೃದ್ಧಿಸಬೇಕು ಎಂದು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ವಿ.ಸಿ ಫಾರ್ಮ್ ವೃತ್ತದಲ್ಲಿರುವ ಜಾನ್‌ಡೀರ್ ಕೃಷ್ಣವೇಣಿ ಟ್ರಾೃಕ್ಟರ್ ಶೋರೂಂ ಬಳಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ, ಕೃಷಿಕ ಅಲಯನ್ಸ್ ಸಂಸ್ಥೆ, ಸಕ್ಕರೆನಾಡು ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದ ಬೇಡಿಕೆಗೆ ಅನುಗುಣವಾಗಿ ರಕ್ತ ಸಿಗುತ್ತಿಲ್ಲ. ಹಳೇ ರಕ್ತದಾನಿಗಳು ಮಾತ್ರ ನಿರಂತರವಾಗಿ ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಹೊಸ ತಲೆಮಾರಿನ ಯುವಕರು, ಸಾರ್ವಜನಿಕರು ರಕ್ತದಾನ ಮಾಡಲು ಮುಂದಾಗಬೇಕು. ಒಂದು ಯುನಿಟ್ ರಕ್ತದಿಂದ 4 ರಿಂದ 5 ಜನರ ಜೀವ ಉಳಿಸುತ್ತದೆ ಎಂದರು.

ದೇಶದ ಜನಸಂಖ್ಯೆಯಲ್ಲಿ ಶೇ.1ರಿಂದ 2ರಷ್ಟು ಜನ ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ಇದು ಶೇ.4ರಷ್ಟು ಹೆಚ್ಚಾಗಬೇಕಿದೆ. ದೇಶದಲ್ಲಿ 100 ಯುನಿಟ್ ರಕ್ತದ ಅವಶ್ಯವಿದ್ದರೆ, ಕೇವಲ 60 ಯುನಿಟ್ ರಕ್ತಸಂಗ್ರಹವಾಗುತ್ತಿದೆ. 40 ಯುನಿಟ್ ಕೊರತೆ ಎದುರಿಸುವಂತಾಗಿದೆ. ಇದನ್ನು ಸರಿದೂಗಿಸಲು ಹೊಸ ರಕ್ತದಾನಿಗಳು ಹುಟ್ಟಿಕೊಳ್ಳಬೇಕು. 18 ವರ್ಷದಿಂದ 80 ರವರೆಗೆ ರಕ್ತದಾನ ಮಾಡಬಹುದು. ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಮಾನವೀಯ ಸೇವೆ ಎಂದರೆ ಅದು ರಕ್ತದಾನವಾಗಿದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ 600 ಜನ ಜೀವ ಉಳಿಸಿದ ಮಾನವೀಯ ಸೇವಾ ಸಾರ್ಥಕತೆ ತಮ್ಮದಾಗುತ್ತದೆ. ಇಂತಹ ಸದಾವಕಾಶವನ್ನು ಕೊಡುಗೆಯಾಗಿ ನೀಡಿ ಎಂದು ಕಿವಿಮಾತೇಳಿದರು.

ಕೃಷಿಕ ಅಲಯನ್ಸ್ ಸಂಸ್ಥೆ ನಿರ್ದೇಶಕ ಕೆ.ಎಸ್.ಹೊನ್ನೇಗೌಡ, ಪುಟ್ಟಸ್ವಾಮಿ, ಅಲಯನ್ಸ್ ಸಂಸ್ಥೆ 1ನೇ ಉಪ ಗವರ್ನರ್ ಕೆ.ಆರ್.ಶಶಿಧರ ಈಚೆಗೆರೆ, ರಕ್ತದಾನ ಅಲಯನ್ಸ್ ಅಧ್ಯಕ್ಷ ಶಿವಕುಮಾರ್, ಕೆ.ಜೆ ಜೋಗಿಗೌಡ, ಹರ್ಷ, ಸೌಭಾಗ್ಯಮ್ಮ, ಮಿಮ್ಸ್ ರಕ್ತನಿಧಿ ಕೇಂದ್ರದ ವೈದ್ಯ ಡಾ.ಗಗನ್ ಇತರರಿದ್ದರು. ಇದೇ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net