ಎರಡೂವರೆ ಕೋಟಿ ಯೂನಿಟ್ ರಕ್ತದ ಕೊರತೆ: ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಟಿ.ಹನುಮಂತು ಆತಂಕ

Voluntary blood donation camp mandya
Published on

ಮಂಡ್ಯ: ದೇಶದಲ್ಲಿ ರಕ್ತದ ಕೊರತೆ ಹೆಚ್ಚಿದೆ. 5 ಕೋಟಿ ಯೂನಿಟ್ ರಕ್ತಕ್ಕೆ ಬೇಡಿಕೆ ಇದ್ದು, ಮೂರೂವರೆ ಕೋಟಿ ಯೂನಿಟ್ ಸಿಗುತ್ತಿದೆ. ಇನ್ನೂ ಎರಡೂವರೆ ಕೋಟಿ ಯೂನಿಟ್ ರಕ್ತದ ಕೊರತೆ ಇದೆ ಎಂದು ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.

ನಗರದ ಪಿಇಎಸ್ ಇಂಜಿನಿಯರಿಗ್ ಕಾಲೇಜು ಆವರಣದ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಮಿಮ್ಸ್ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತಕ್ಕೆ ಪರ್ಯಾಯ ವಸ್ತು ಜಗತ್ತಿನಲ್ಲಿ ಸಂಶೋಧನೆ ಮಾಡಲು ಸಾಧ್ಯ ಆಗಿಲ್ಲ ಎಂದರು.

ರಕ್ತದಾನ ಎನ್ನುವುದು ಮಾನವೀಯತೆಯ ಸಂಕೇತ. ಒಮ್ಮೆ ರಕ್ತದಾನ ಮಾಡಿದರೆ ಮೂರರಿಂದ ನಾಲ್ಕು ಜನರ ಪ್ರಾಣ ಉಳಿಸಬಹುದು. ಆದರಿಂದ ವಿದ್ಯಾರ್ಥಿಗಳು ರಕ್ತದಾನ ಮಾಡುವ ಪ್ರೌವೃತ್ತಿ ಬೆಳೆಸಿಕೊಳ್ಳಿ. ಇತ್ತೀಚಿಗೆ ಹೊಸ ಹೊಸ ರಕ್ತದಾನಿಗಳನ್ನು ಹುಟ್ಟು ಹಾಕಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರ ಆಯೋಜಿಸಿದಾಗ ಭಾಗವಹಿಸುವ ಮೂಲಕ ರಕ್ತದಾನ ಮಾಡಿ ಎಂದು ಹೇಳಿದರು.

ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ರಕ್ತದಾನ ಎಲ್ಲ ದಾನಗಳಿಗಿಂತ ಮಹತ್ವವಾದುದು. ಆದ್ದರಿಂದ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಅತಿ ಹೆಚ್ಚು ಯೂನಿಟ್ ರಕ್ತದಾನ ಮಾಡಿ ಪ್ರತಿ ವರ್ಷ ಪ್ರಶಸ್ತಿ ಪಡೆದುಕೊಳ್ಳುತ್ತಿದೆ. ಡಿ.20, 21 ಮತ್ತು 22ರಂದು ಮಂಡ್ಯದಲ್ಲಿ 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಭಾಗವಹಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪಪ್ರಾಂಶುಪಾಲ ಡಾ.ವಿನಯ್, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಚ್.ಸಿ.ಚರಣ್‌ಕುಮಾರ್, ಡಾ.ರಜಿನಿ, ಘಟಕದ ಅಧ್ಯಕ್ಷ ತುಷಾಂತ್, ಉಪಾಧ್ಯಕ್ಷ ಸೂರ್ಯ ಕಶ್ಯಪ್, ಯಶವಂತ್, ರೋಹನ್, ದೀನ್, ನಿಶ್ಚಿತಾ, ಬಿಂದು, ಪ್ರೀತಿ, ಶರಣ್ಯ, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕರಾದ ಟಿ.ನಾರಾಯಣಸ್ವಾಮಿ, ಷಡಕ್ಷರಿ, ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಡಾ.ಶಿವಕುಮಾರ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ, ರಾಜಣ್ಣ, ಜಗದೀಶ್, ರಾಮು ಹಾಜರಿದ್ದರು.

ತನ್ನ ದಾಖಲೆಯನ್ನೇ ಮುರಿದ ಪಿಇಎಸ್

ಶಿಕ್ಷಣ ಸಂಸ್ಥೆಗಳ ಪೈಕಿ ಪ್ರತಿ ವರ್ಷ ಅತಿ ಹೆಚ್ಚು ರಕ್ತ ಸಂಗ್ರಹಿಸುವ ಹೆಗ್ಗಳಿಕೆ ಹೊಂದಿರುವ ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ಈ ಬಾರಿ 411 ಯೂನಿಟ್ ರಕ್ತ ಸಂಗ್ರಹ ಮಾಡಿದೆ. ಇದರೊಂದಿಗೆ ತನ್ನ ಹೆಸರಿನಲ್ಲಿದ್ದ ಹಳೆಯ ದಾಖಲೆ ಅಂದರೆ 370 ಯೂನಿಟ್ ರಕ್ತ ಸಂಗ್ರಹದ ದಾಖಲೆಯನ್ನು ಮುರಿದರು. ಗುರುವಾರ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ರಕ್ತದಾನ ಮಾಡಿದರು. ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಸಂಗ್ರಹಿಸಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಹಸ್ತಾಂತರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net