

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕುಂಬಾರರ ಸೇವಾ ಸಂಘ, ಶ್ರೀ ರಾಮ ನಗರ ಬಂದಾರು ಜೈ ಶ್ರೀರಾಮ್ ಗೆಳೆಯರ ಬಳಗ ಸಂಯುಕ್ತ ಆಶ್ರಯದಲ್ಲಿ ಫೆ.22ರಂದು ದ.ಕ. ಜಿಲ್ಲಾ ಮಾಗಣೆಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭ ಸಮಾಗಮ, ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, ಸನ್ಮಾನ ಕಾರ್ಯಕ್ರಮ ಬಂದಾರು ಶ್ರೀ ರಾಮನಗರದ ಶಿವಪ್ರಿಯ ಮೈದಾನದಲ್ಲಿ ನಡೆಯಲಿದೆ ಎಂದು ಸಮಾವೇಶದ ಕಾರ್ಯಾಧ್ಯಕ್ಷ ವಕೀಲ ಉದಯ ಬಿ.ಕೆ. ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕುಂಬಾರರ ಮಹಾ ಸಂಘ ಅಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ರಾಜೀವ ಗಾಂಧಿ ವಿ.ವಿ. ಸೆನೆಟ್ ಸದಸ್ಯ ಶ್ರೀನಿವಾಸ ಮೇಲು, ನಾಯಕರಾದ ಹರೀಶ್ ಕಾರಿಂಜ, ಡಾ.ಅಣ್ಣಯ್ಯ ಕುಲಾಲ್, ಪದ್ಮಕುಮಾರ್, ಭಾಸ್ಕರ ಪೆರುವಾಯಿ, ಉದ್ಯಮಿ ಕಿರಣ್ ಚಂದ್ರ, ಕುಂಬಾರ ಸಮುದಾಯದ ವಿವಿಧ ಗುರಿಕಾರರು, ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಬಂದಾರು ಕುಂಬಾರರ ಸೇವಾ ಸಂಘ ಅಧ್ಯಕ್ಷ ಕೆಂಚಪ್ಪ ಕುಂಬಾರ, ಮಾಜಿ ಅಧ್ಯಕ್ಷ ರಮೇಶ್ ಕುಂಬಾರ, ಕಾರ್ಯದರ್ಶಿ ಪ್ರಕಾಶ್ ಕೆ, ಜೈ ಶ್ರೀರಾಮ ಗೆಳೆಯರ ಬಳಗ ಕಾರ್ಯದರ್ಶಿ ಚಂದ್ರಶೇಖರ ಬಿ.ಕೆ. ಉಪಸ್ಥಿತರಿದ್ದರು.
ಸಮುದಾಯ ಸಂಘಟಿಸುವ ಉದ್ದೇಶ
ಸಮುದಾಯದ ಜನರ ಪರಿಶ್ರಮ, ಆಚಾರ-ವಿಚಾರ ಸಂಪ್ರದಾಯ, ಕುಂಬಾರ ಸಮುದಾಯವನ್ನು ಸಂಘಟಿಸುವ ಉದ್ದೇಶ, ಕುಂಬಾರ ಸಮುದಾಯದ ಮೂಲ ಸಂಸ್ಕೃತಿ ಉಳಿಸುವ ಉದ್ದೇಶ, ಸಮುದಾಯದ ಜನರಿಗೆ ಜಾಗೃತಿ ಮೂಡಿಸುವ ಧ್ಯೇಯದೊಂದಿಗೆ ಕುಂಬಾರರಿಗೆ ರಾಜಕೀಯ ಸ್ಥಾನಮಾನ ಕುಲವೃತ್ತಿ ಕುಂಬಾರಿಕೆಯನ್ನು ಉಳಿಸಿ ಬೆಳೆಸಲು ಸರ್ಕಾರದಿಂದ ವಿಶೇಷ ಸೌಲಭ್ಯಕ್ಕೆ ಒತ್ತಾಯಿಸಿ ದ.ಕ. ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಬಾ ಸಮಾಗಮ, ವಿವಿಧ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.