

ಕುಶಾಲನಗರ: ಕ್ರೀಡಾಕೂಟಗಳು ಪರಸ್ಪರ ಸ್ನೇಹ, ಸಾಮರಸ್ಯ ಮೂಡಿಸುತ್ತವೆ ಎಂದು ಹಿರಿಯ ವಾಲಿಬಾಲ್ ಆಟಗಾರ ಕೂಡಿಗೆ ಬಾದ್ ಶಾ ಹೇಳಿದರು.
ಕೂಡ್ಲೂರು ಗ್ರಾಮದ ಬಸವೇಶ್ವರ ಯುವಕ ಸಂಘದ ವತಿಯಿಂದ ಕೂಡ್ಲೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಎರಡನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಮನುಷ್ಯನ ಆರೋಗ್ಯವನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತದೆ. ಅಲ್ಲದೇ, ಕ್ರೀಡಾಕೂಟಗಳು ಪರಸ್ಪರ ಸ್ನೇಹ ಸಾಮರಸ್ಯ ಮೂಡಿಸುವುದರ ಜತೆಗೆ ಆಟಗಾರರ ಆರೋಗ್ಯವೂ ವೃದ್ಧಿಸಲಿದೆ ಎಂದರು.
ಪಂದ್ಯಾವಳಿಯ ಆಯೋಜಕ ಕೆ.ವಿಶ್ವ ಮಾತನಾಡಿ, ಕ್ರೀಡಾಸಕ್ತ ಯುವ ಸಮೂಹವನ್ನು ಒಂದೆಡೆ ಸಂಘಟಿಸಿ ಅವರಲ್ಲಿ ಕ್ರೀಡಾ ಪ್ರೇಮ ಮೊಳಗಿಸಲು ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಪಂದ್ಯಾವಳಿಯಲ್ಲಿ ಕೂಡಿಗೆ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಶಾಂತ್ ಬ್ರದರ್ಸ್, ದರ್ಶನ್ ಬ್ರದರ್ಸ್, ಚಿರಾಗ್ ಫ್ರೆಂಡ್ಸ್, ಬಿಲಾಲ್ ಫ್ರೆಂಡ್ಸ್ ಹಾಗೂ ಮಾರುತಿ ಫ್ರೆಂಡ್ಸ್ ಆರು ತಂಡಗಳು ಭಾಗವಹಿಸಿದ್ದವು. ಕೂಡ್ಲೂರು ಗ್ರಾಮದ ಕೆ.ವಿಶ್ವ, ಹೇಮಂತ್ ಹಾಗೂ ಪುನೀತ್ ಕ್ರೀಡಾಕೂಟ ಆಯೋಜಿಸಿದ್ದರು. ತೀರ್ಪುಗಾರರಾಗಿ ಬಸವನಹಳ್ಳಿ ಗಣೇಶ್, ರಾಮನಾಥಪುರದ ದಿಲೀಪ್ ಹಾಗೂ ಬ್ಯಾಡಗಟ್ಟದ ಅರುಣ್ ಕಾರ್ಯನಿರ್ವಹಿಸಿದರು. ಕೂಡಿಗೆಯ ಸಂತೋಷ್ ವೀಕ್ಷಕ ವಿವರಣೆ ನೀಡಿದರು.