

ಮೂಡುಬಿದಿರೆ: ನನ್ನ ಇಂದಿನ ಎಲ್ಲ ಸಾಧನೆಗಳಿಗೆ ಆಳ್ವಾಸ್ ಕಾರಣ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮೂಲಕ ಆಳ್ವಾಸ್ ನೀಡಿದ ಅವಕಾಶಗಳು ಮತ್ತು ಮಾರ್ಗದರ್ಶನದಿಂದ ನನ್ನ ಜೀವನದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಉಡುಪಿ ವಲಯದ ಫಾರೆಸ್ಟ್ ಬೀಟ್ ಆಫೀಸರ್, ಹಿರಿಯ ವಿದ್ಯಾರ್ಥಿ ಶರತ್ ಶೆಟ್ಟಿ ಹೇಳಿದರು.
ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರೆಪಿ ಆಯೋಜಿಸಿದ್ದ ರಾಜೀವ್ ಗಾಂಧಿ ವಿಜ್ಞಾನ ವಿವಿಗಳ ಮಂಗಳೂರು ವಲಯ ಮಟ್ಟದ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್‌ನಲ್ಲಿ ನಿಜವಾದ ಕಲಿಕೆ ಸಂಜೆ ಐದು ಗಂಟೆಯ ನಂತರ ಆರಂಭವಾಗುತ್ತದೆ. ದಿನನಿತ್ಯದ ತರಗತಿಗಳ ನಂತರ ನಡೆಯುವ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಜೀವನ ಕೌಶಲ ಕಲಿಸುತ್ತವೆ. ಇಂತಹ ಕಲಿಕೆಯಲ್ಲಿ ತೊಡಗಿಕೊಂಡವರ ಬದುಕು ಹಸನಾಗಿದೆ. ಇಂದಿನ ಮುಖ್ಯ ಅತಿಥಿಗಳು ಈ ನೆಲೆಯಲ್ಲಿ ಜೀವಂತ ನಿದರ್ಶನ ಎಂದರು.
ಪ್ರಾಂಶುಪಾಲ ಪ್ರೊ.ಕ್ಷಮಾ ಸುಶೀಲ್ ಶೆಟ್ಟಿ, ಆಳ್ವಾಸ್ ದೈಹಿಕ ಕಾಲೇಜು ಪ್ರಾಂಶುಪಾಲ ಮಧು ಜಿ.ಆರ್., ದೈಹಿಕ ನಿರ್ದೇಶಕ ಅವಿನಾಶ್, ಹರೀಶ್ ಗೌಡ ಉಪಸ್ಥಿತರಿದ್ದರು.