

ಮಡಿಕೇರಿ: ಕಡಗದಾಳುವಿನ ಕಾರ್ನರ್ ಫ್ರೆಂಡ್ಸ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 6ನೇ ವರ್ಷದ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಕುಶಾಲನಗರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾಟದಲ್ಲಿ ಕುಶಾಲನಗರ ತಂಡ 25-20, 25-22 ನೇರ ಸೆಟ್‌ಗಳಿಂದ ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಹೊದವಾಡ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 18,000 ರೂ.ನಗದು, ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10,000 ರೂ. ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.
ಉತ್ತಮ ಆಟಗಾರನಾಗಿ ಕುಶಾಲನಗರ ತಂಡದ ಮನೋಜ್, ಬೆಸ್ಟ್ ಸ್ಮ್ಯಾಷರ್ ವದವಾಡ ತಂಡದ ಕಿಸಾನ್ ಪಡೆದುಕೊಂಡರು. ಪಂದ್ಯಾಟದಲ್ಲಿ ರಾಜ್ಯ ಮಟ್ಟದ ಆಟಗಾರರಾದ ರಾಕೇಶ್, ಮಂಜುನಾಥ್ ಅತಿಥಿ ಆಟಗಾರರಾಗಿ ಭಾಗಿಯಾಗಿದ್ದರು.
ಜೂನಿಯರ್ ಇಂಡಿಯಾ ಇನ್ ದಿ ಏಷಿಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದ ಕೆಚ್ಚೆಟ್ಟಿರ.ಡಿ.ವಿಜಯ್ ಉತ್ತಯ್ಯ, ಸಬ್ ಜೂನಿಯರ್ ನ್ಯಾಷನಲ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಗೋಲ್ ಕೀಪರ್ ಮಾಡಿದ ಕಾವ್ಯಶ್ರೀ, ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಅನೂಪ್ ಡಿ ಕೊಷ್ಟಾ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಗುಂಡು ಎಸೆತ ಆಟಗಾರ್ತಿ ರೇಷ್ಮಾ ದೇವಯ್ಯ, ನಿವೃತ್ತ ಸೈನಿಕ ಪ್ರಭಾಕರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿಗಳಾದ ಯುಸಫ್, ನಾಸಿರ್, ಕಿರಣ್, ಬಾಲಕೃಷ್ಣ ಭಟ್, ಸ್ಥಳ ದಾನಿಗಳಾದ ಸುಳ್ಳಿರ ವೆಂಕಪ್ಪ, ಬೊಟ್ಲಪ್ಪ ಯುವಕ ಸಂಘದ ಗೌರವ ಅಧ್ಯಕ್ಷ ಜಯಪ್ಪ, ವಿವೇಕ್ ಕಡಗದಾಳು, ದೇಶಪ್ರೇಮಿ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ್ ಭಾಗಿಯಾಗಿದ್ದರು.