ಜಾತಿಜನಗಣತಿ ವಿರುದ್ಧ ಒಕ್ಕಲಿಗರು ಒಗ್ಗಟ್ಟು: ಸರ್ಕಾರಕ್ಕೆ ಸಂದೇಶ ಕೊಟ್ಟ ಪ್ರತಿನಿಧಿಗಳು

census
Published on

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಕೈಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಾಧಕ-ಬಾಧಕದ ಬಗ್ಗೆ ಒಕ್ಕಲಿಗ ಸಮುದಾಯದ ಮಂತ್ರಿಗಳು, ಸ್ವಾಮೀಜಿಗಳು, ಮಾಜಿ ಶಾಸಕರು, ಶಾಸಕರು ಮತ್ತು ರಾಜಕೀಯ ಮುಖಂಡರು ಚರ್ಚಿಸಿದರು.

ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಾತಿ ಜನಗಣತಿ ಕುರಿತು ‘ಒಕ್ಕಲಿಗ ಸಮುದಾಯದ ಜಾಗೃತಿ ಸಭೆ’ಯಲ್ಲಿ ರಾಜಕೀಯ ಬದಿಗೊತ್ತಿ ಮೂರು ಪಕ್ಷದ ಸಮುದಾಯ ರಾಜಕೀಯ ಮುಖಂಡರು ಒಗ್ಗಟ್ಟು ಸಾಧಿಸಿದರು. ಸಮೀಕ್ಷೆ ಬಗ್ಗೆ ಸರ್ಕಾರ ವ್ಯತಿರಿಕ್ತ ತೀರ್ಮಾನ ತೆಗೆದುಕೊಂಡರೆ ಹೋರಾಟಕ್ಕೂ ಸಿದ್ಧ ಎಂಬ ಸಂದೇಶ ಸಾರಿದರು. ಸಮೀಕ್ಷೆಯಲ್ಲಿ ನ್ಯೂನ್ಯತೆ, ಇದನ್ನು ಸರಿಪಡಿಸಲು ತೆಗೆದುಕೊಳ್ಳಬೇಕಾದ ಕ್ರಮವೇನು, ಕಾಲಂನಲ್ಲಿ ಏನು ಬರೆಸಬೇಕು ಮತ್ತು ಕಾಲಂನಲ್ಲಿ ‘ಒಕ್ಕಲಿಗ’ ಎಂದು ನಮೂದಿಸುವುದು ಸೇರಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹಲವು ರಾಜಕೀಯ ಮುಖಂಡರು ಹೇಳಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜಾತಿಗಣತಿ ಬಗ್ಗೆ ಜನಪ್ರತಿನಿಧಿಗಳು ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕು. ಸಮೀಕ್ಷೆಯಲ್ಲಿ ಹಲವು ಗೊಂದಲಗಳಿವೆ. ಇವುಗಳನ್ನು ಬಗೆಹರಿಸಲು ನಮ್ಮ ಜನಾಂಗದ ಮಂತ್ರಿಗಳ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಶ್ರೀಗಳು ಹೇಳಿದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಿಲಾನಂದನಾಥ ಸ್ವಾಮೀಜಿ ಮಾತನಾಡಿ, ನಮ್ಮ ಸಮುದಾಯದ ಜನಸಂಖ್ಯೆ ಒಂದು ಕೋಟಿ ಇದೆ. ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು. ಈ ಬಗ್ಗೆ ಜನರಿಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕೆಲಸವಾಗಬೇಕು. 15 ದಿನದಲ್ಲಿ 60 ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.

ಮೂರು ಪೀಠದ ಸ್ವಾಮೀಜಿಗಳು ತೆಗೆದುಕೊಂಡಿರುವ ತೀರ್ಮಾನವನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆಯಲ್ಲಿ ರಾಜಕೀಯ ಎಂಬುದು ಸಾಮಾನ್ಯ. ಆದರೆ, ಸಮಾಜ ಹಾಗೂ ಸ್ವಾಮೀಜಿ ಎಂದರೆ ನಮಗೆ ಭಯ ಇದೆ. ಶ್ರೀಗಳು ನೀಡುವ ಸೂಚನೆಯನ್ನು ತಪ್ಪದೆ ಪಾಲಿಸುತ್ತೇನೆ. ನಾವೆಲ್ಲರೂ ಒಗ್ಗಟ್ಟಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸಮೀಕ್ಷೆಯಲ್ಲಿ ಜಾತಿ ಜಾತಿ ನಡುವೆ ಕಿತ್ತಾಟ ಉಂಟು ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸರ್ಕಾರಕ್ಕೆ ಸಂದೇಶ ಕೊಡಲು ಮುಂದಾಗಿರುವುದು ಸಂತಸ ತಂದಿದೆ. ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ಹೇಳಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಕೆ. ವೆಂಕಟೇಶ್ ಸಭೆಗೆ ಗೈರಾಗಿದ್ದರು. ಒಕ್ಕಲಿಗರ ಸಮುದಾಯದ ಶಾಸಕರು, ಸಂಘ ಸಂಸ್ಥೆಗಳು ಭಾಗಿಯಾಗಿದ್ದರು.

ಒಕ್ಕಲಿಗ ದೊಡ್ಡ ಸಮುದಾಯ

ರಾಜ್ಯದಲ್ಲಿ ಒಕ್ಕಲಿಗರದು ದೊಡ್ಡ ಸಮುದಾಯ. 2ನೇ ದೊಡ್ಡ ಜಾತಿ ಎಂದು ನಮ್ಮ ಮಕ್ಕಳಿಗೂ ಗೊತ್ತಿದೆ. ಸಮೀಕ್ಷೆ ತಪ್ಪಾದರೆ ನಮಗೆ ಸಮಸ್ಯೆಯಾಗಲಿದೆ. ನಾವು ಸಮೀಕ್ಷೆ ತಪ್ಪಾಗಿ ಮಾಡಿದರೆ ಜನರು ನಮಗೆ ಶಿಕ್ಷೆ ಕೊಡ್ತಾರೆ. ಗಣತಿಯಿಂದ ಒಕ್ಕಲಿಗ ಸಮುದಾಯಕ್ಕೆ ದೊಡ್ಡ ಡ್ಯಾಮೇಜ್ ಆಗಲಿದೆ. ಈ ವಿಚಾರದಲ್ಲಿ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಡಿಕೆಶಿ ಬಗ್ಗೆ ಮೆಚ್ಚುಗೆ

ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯನ್ನು ವಿರೋಧಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ನಡೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಮೀಕ್ಷೆಯನ್ನು ಡಿಸಿಎಂ ಸೇರಿ ಅನೇಕರು ವಿರೋಧಿಸಿರುವ ಬಗ್ಗೆ ಮಾಹಿತಿ ಬಂದಿತ್ತು. ಇದನ್ನು ಸ್ವಾಗತಿಸುತ್ತೇನೆ ಎನ್ನುತ್ತಿದ್ದಂತೆ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು. ಈಗ ಕೇಂದ್ರ ಸರ್ಕಾರದಿಂದ ಜಾತಿಗಣತಿ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರ ಸಮೀಕ್ಷೆ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ ಎಚ್‌ಡಿಕೆ, ನಾವೆಲ್ಲರೂ ಒಗ್ಗಟ್ಟಾಗಿ ಸಾಗೋಣ ಎಂದು ಸಲಹೆ ನೀಡಿದರು.

ಹೊಸ ಸಮೀಕ್ಷೆಯಿಂದ ರಾಜ್ಯಕ್ಕೆ ಬೆಂಕಿ

ಕಾಂಗ್ರೆಸ್ ಸರ್ಕಾರ ಹೊಸ ಸಮೀಕ್ಷೆ ನಡೆಸುವ ಮೂಲಕ ರಾಜ್ಯಕ್ಕೆ ಬೆಂಕಿ ಹಾಕಲು ಹೊರಟಿದೆ. ಈ ವರದಿ ಕಾಂತರಾಜು ವರದಿಗಿಂತ ಕೆಟ್ಟದಾಗಿ ಇರಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಜಾತಿ ವಿಚಾರದಲ್ಲಿ ಒಕ್ಕಲಿಗರಿಗೆ ದೊಡ್ಡಮಟ್ಟದ ಪೆಟ್ಟು ಬಿದ್ದಿದೆ. ಸಭೆಯಲ್ಲಿ ಸಮೀಕ್ಷೆಯ ಸಾಧಕ -ಬಾಧಕ ಚರ್ಚೆಸಲಾಗಿದೆ. ಈ ಸಮಸ್ಯೆ ಬಗೆಹರಿಸುವ ಬಗ್ಗೆ ಡಿಕೆಶಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಆತುರಾತುರವಾಗಿ ಜಾತಿ ಗಣತಿ ಮಾಡುತ್ತಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಇದರ ಪ್ರತಿಫಲವನ್ನು ಆ ಪಕ್ಷ ಅನುಭವಿಸಲಿದೆ ಎಂದರು.

ಸಮಾಜದ ಬಗ್ಗೆ ನಾವೆಲ್ಲರೂ ಯೋಚನೆ ಮಾಡಬೇಕಿದೆ. ಒಕ್ಕಲಿಗ ಕ್ರಿಶ್ಚಿಯನ್ ಎಂದು ಸೇರಿಸಿದರೆ ನಮಗೆ ದುಃಖವಾಗಲಿದೆ. ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡುವ ಅವಶ್ಯಕತೆ ಏನಿತ್ತು? ಸಮೀಕ್ಷೆ ನಡೆಸಲು ಸಾಕಷ್ಟು ಕಾಲಾವಕಾಶ ಕೊಡಬೇಕು. ನಮ್ಮ ಸಂಘದಿಂದಲೇ ಪರಿಶೀಲನೆ ಮಾಡಲು ತಂಡ ರಚಿಸಬೇಕು. ಸಮೀಕ್ಷೆ ಮುಗಿದ ಬಳಿಕ ಅದರ ಮಾಹಿತಿಯನ್ನು ಅನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ. 

ಯಾರಿಗೂ ಅನ್ಯಾಯ ಆಗಬಾರದು. ಎಲ್ಲ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಶ್ರೀಗಳು ಸೇರಿ ಹಲವರು ನೀಡಿರುವ ಸಲಹೆಗಳನ್ನು ಸ್ವೀಕರಿಸುತ್ತೇನೆ. ಈ ಬಗ್ಗೆ ಸಮುದಾಯದ ಶಾಸಕರು ಜಿಲ್ಲಾ, ತಾಲೂಕು ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ನಾವೆಲ್ಲರೂ ಒಟ್ಟಿಗೆ ಸಾಗುವ ಮೂಲಕ ಸಮಾಜವನ್ನು ಉಳಿಸೋಣ.

ಡಿ.ಕೆ.ಶಿವಕುಮಾರ್, ಡಿಸಿಎಂ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net