ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರು ನನಗೆ ಮತ ಹಾಕಿಲ್ಲ : ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್

lakshman (2)
Published on

ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿ ಯಶಸ್ವಿಯಾಗಿದೆ. ಕಾಂಗ್ರೆಸ್ ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಚುನಾವಣೆ ಸಂದರ್ಭ ನನ್ನನ್ನು ಒಕ್ಕಲಿಗನೇ ಅಲ್ಲ ಅಂದು ಪ್ರಚಾರ ಮಾಡಿದರು. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ 8 ಒಕ್ಕಲಿಗರಿಗೆ ಟಿಕೆಟ್ ನೀಡಿದರೂ ಒಬ್ಬ ಒಕ್ಕಲಿಗನನ್ನು ಮತದಾರರು ಆಯ್ಕೆ ಮಾಡಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು.

ಹುಣಸೂರು ತಾಲೂಕಿನ ಕೆಲವು ಹಳ್ಳಿಗಳಲ್ಲಿ ಒಂದು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂತಹ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ 600 ಮತಗಳು ಬಂದರೆ, ನನಗೆ ಮೂರ‌್ನಾಲ್ಕು ಮತಗಳು ಮಾತ್ರ ಬಂದಿವೆ. ನಾನು ಒಕ್ಕಲಿಗ ಸಮುದಾಯದವನಾದರೂ ಒಕ್ಕಲಿಗರು ಈ ಬಾರಿ ನನಗೆ ಮತ ಹಾಕಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ ಅಪಾರ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿಗೆ ಐದು ರೂ.ಗಳಾದರೂ ನೀಡಿದ್ದಾರಾ? ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಹಲವು ಕೊಡುಗೆಗಳನ್ನು ನೀಡಿದರೂ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ತವರು ಜಿಲ್ಲೆಯಲ್ಲಿ ಸೋಲಿನಿಂದ ನೋವುಂಟಾಯಿತು. ಎಷ್ಟು ಬಾರಿ ಅವರಿಗೆ ನೋವು ಕೊಡ್ತೀರಿ? ಎಂದು ಮತದಾರರ ವಿರುದ್ಧ ಅಸಮಾಧಾನ ಹೊರಹಾಕಿದರು.

ನನಗೆ ಸಿದ್ದರಾಮಯ್ಯ ಅವರೇ ದೇವರು. ಸಿದ್ದರಾಮಯ್ಯ ನನಗೆ ಟಿಕೆಟ್ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲ ನೀಡಿದರು. ಎಂಟು ಕ್ಷೇತ್ರದ ಶಾಸಕರು, ಮಾಜಿ ಶಾಸಕರು ನನಗೆ ಸಹಕಾರ ನೀಡಿದರು. ಆದರೆ, ನನಗೆ ಅದೃಷ್ಟ ಇರಲಿಲ್ಲ, ಹಣೆಬರಹ ಸರಿ ಇರಲಿಲ್ಲ. ಹಾಗಾಗಿ ಸೋಲು ಅನುಭವಿಸಿದೆ. ಬಿಜೆಪಿ ಅಭ್ಯರ್ಥಿ ಯದುವೀರ್ ಜನರನ್ನು ಎಷ್ಟರ ಮಟ್ಟಿಗೆ ಅರಮನೆ ಒಳಗೆ ಬಿಟ್ಟುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನು ನಾಳೆಯಿಂದಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.

ಹಿಂದಿನ ಸಂಸದ ಪ್ರತಾಪ್ ಸಿಂಹ ಅವರಂತೆ ನೂತನ ಸಂಸದ ಯದುವೀರ್ ಆಗದೆ ಇರುವುದು ಉತ್ತಮ. ಪ್ರತಾಪ್ ಸಿಂಹ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಯಾವುದೇ ಹೊಸ ಯೋಜನೆಯನ್ನು ಇಲ್ಲಿಗೆ ತರಲಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಗಮನಹರಿಸಲಿಲ್ಲ. ನೂತನ ಸಂಸದರು ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ, ರೈಲ್ವೆ ಟರ್ಮಿನಲ್ ನಿರ್ಮಾಣದ ಕಡೆಗೆ ಗಮನ ಹರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net