

ಸೋಮವಾರಪೇಟೆ: ಕರ್ನಾಟಕ ಒಕ್ಕಲಿಗರ ಸಂಘದ ಸದಸ್ಯತ್ವ ಆಂದೋಲನ ಪ್ರಾರಂಭವಾಗಿದೆ. ಆಸಕ್ತಿಯಿರುವ ಒಕ್ಕಲಿಗರು ಸದಸ್ಯತ್ವ ಪಡೆದುಕೊಳ್ಳಬಹುದು ಎಂದು ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಎಚ್.ಎನ್.ರವೀಂದ್ರ ಹೇಳಿದರು.
ಸೋಮವಾರಪೇಟೆ ಒಕ್ಕಲಿಗರ ಸೌಹಾರ್ದ ಸಹಕಾರ ಸಂಘದಲ್ಲಿ ಸದಸ್ಯತ್ವ ನೋಂದಣಿ ಫಾರ್ಮ್ ದೊರೆಯಲಿದ್ದು, 1650 ರೂ.ಗಳನ್ನು ಪಾವತಿಸಿ, ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಅಥವಾ ಜಾತಿ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮುಂದಿನ ಎರಡು ತಿಂಗಳ ಕಾಲಾವಕಾಶ ಮಾತ್ರ ಇರುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಒಕ್ಕಲಿಗ ಗೌಡ ಜನಾಂಗದ ವಿದ್ಯಾರ್ಥಿಗಳಿಗೆ ಒಕ್ಕಲಿಗರ ಸಂಘದಿಂದ 5 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಹೇಳಿದರು. ಅರ್ಜಿ ಫಾರ್ಮ್‌ನೊಂದಿಗೆ ಮಾರ್ಕ್ಸ್ ಕಾರ್ಡ್ ಪ್ರತಿ ಸಲ್ಲಿಸಬೇಕು ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಿದ ನೋಂದಾಯಿತ ಜಿಲ್ಲಾ ಮತ್ತು ತಾಲೂಕು ಒಕ್ಕಲಿಗರ ಸಂಘಕ್ಕೆ ಸಹಾಯಧನ ನೀಡಲಾಗುತ್ತದೆ. ನೋಂದಣಿ ಸಂಖ್ಯೆ ಸಮೂದಿಸಿ ಅರ್ಜಿ ಸಲ್ಲಿಸಿದರೆ ಜಿಲ್ಲಾ ಸಂಘಕ್ಕೆ 50 ಸಾವಿರ ರೂ.ಗಳು ಮತ್ತು ತಾಲೂಕು ಸಂಘಕ್ಕೆ 25 ಸಾವಿರ ರೂ.ಗಳ ಸಹಾಯಧನ ನೀಡಲಾಗುವುದು ಎಂದು ಹೇಳಿದರು.
ಸೋಮವಾರಪೇಟೆ ಪಟ್ಟಣದಲ್ಲಿ ಒಕ್ಕಲಿಗರ ಸಂಘದಿಂದ 10 ಕೋಟಿ ರೂ.ಗಳ ವೆಚ್ಚದ ಬಾಲಕಿಯರ ವಸತಿ ನಿಲಯ ಕಾಮಗಾರಿ ಟೆಂಡರ್ ನಂತರ ಪ್ರಾರಂಭವಾಗಲಿದೆ ಎಂದು ಹೇಳಿದರು.
ಸಹಕಾರ ಸಂಘದ ಉಪಾಧ್ಯಕ್ಷ ಕೆ.ಬಿ.ಸುರೇಶ್, ನಿರ್ದೇಶಕರಾದ ಪಿ.ಕೆ.ರವಿ, ಪ್ರಸಿ ಗೌಡಳ್ಳಿ, ಒಕ್ಕಲಿಗರ ಯುವ ವೇದಿಕೆ ಉಪಾಧ್ಯಕ್ಷ ಎಚ್.ಕೆ.ಪೃಥ್ವಿ ಇದ್ದರು.