

ಮಂಡ್ಯ: ಮೀಸಲಾತಿ ಹಂಚಿಕೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ತಾರತಮ್ಯವಾಗಿದೆ. ಹಿಂದೆ ವೆಂಕಟಸ್ವಾಮಿ ಆಯೋಗದಿಂದ ನಮ್ಮ ಸಮುದಾಯಕ್ಕಾದ ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದೇವೆ. ಅದರ ಫಲವಾಗಿ ಅಂದು ನ್ಯಾಯ ಸಿಕ್ಕಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಮೀಸಲಾತಿ ಹೆಚ್ಚಳವಾಗಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಡಾ.ಸಿ.ಆರ್.ರಾಜು ಬೇಸರ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಕೆಂಪೇಗೌಡ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಜನಪ್ರತಿನಿಧಿಗಳು, ಮಠಗಳು ಸಮುದಾಯದ ಪರವಾದ ಯೋಜನೆಗಳನ್ನು ರೂಪಿಸಬೇಕು. ಒಕ್ಕಲಿಗರ ಸಂಘ ಹಾಗೂ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವರೆಲ್ಲರೂ ಕೋಟ್ಯಾಧಿಪತಿಗಳೇ ಹೊರತು ಯಾರೂ ಬಡವರಲ್ಲ. ಅವರು ಸ್ವಹಿತಾಸಕ್ತಿಗಾಗಿ ಆಯ್ಕೆಯಾಗಿ ಹೋಗುತ್ತಾರೆ ವಿನಃ ಸಮುದಾಯದ ಅಭಿವೃದ್ಧಿ ಚಿಂತನೆ ಮಾಡುತ್ತಿಲ್ಲ. ಇನ್ನಾದರೂ ಸಮುದಾಯದ ಏಳಿಗೆಗೆ ಯೋಜನೆ ರೂಪಿಸಬೇಕು. ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿದ್ದ ನಾವು ಇಂದು ವಿಭಕ್ತ ಕುಟುಂಬವಾಗಿ ಇದ್ದ ಭೂಮಿಯನ್ನು ತುಂಡು ತುಂಡು ಮಾಡಿ 5-10 ಗುಂಟೆ ಜಮೀನು ಹೊಂದಿದ್ದೇವೆ. ಜಾತ್ಯಾತೀತ ಪರಿಕಲ್ಪನೆಯಲ್ಲಿ ಎಲ್ಲ ಜಾತಿ-ವರ್ಗದವರನ್ನೂ ಒಟ್ಟಿಗೆ ಕೊಂಡೊಯ್ಯುತ್ತಿದ್ದ ಒಕ್ಕಲಿಗ ಸಮುದಾಯ ಇಂದು ಬೇಡುವ ಸ್ಥಿತಿಗೆ ಬಂದು ನಿಂತಿದೆ. ಇದಕ್ಕೆ ನಮ್ಮನ್ನಾಳುವ ಜನಪ್ರತಿನಿಧಿಗಳೇ ಕಾರಣ. ಸಮುದಾಯದಿಂದ ಆಯ್ಕೆಯಾಗಿ ಹೋಗುವ ಪ್ರತಿನಿಧಿಗಳು ಸಮುದಾಯದ ಏಳಿಗೆಯನ್ನು ಬಿಟ್ಟು ಸ್ವಹಿತಾಸಕ್ತಿಗಾಗಿ ಹೋರಾಟ ಮಾಡುತ್ತಾರೆ. ಇದು ದುರ್ದೈವದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ಕೃಷಿಯನ್ನೇ ನಂಬಿ ಬದುಕುವ ವಾತಾವರಣ ಇತ್ತು. ಆದರೆ ಇಂದು ಎಂಟತ್ತು ಎಕರೆ ಜಮೀನಿದ್ದರೂ ಕೃಷಿ ಬಿಟ್ಟು ಎಲ್ಲರೂ ಹಸಿರು ಕಾರ್ಡ್ ಪಡೆದು ನ್ಯಾಯಬೆಲೆ ಅಂಗಡಿಗಳ ಮುಂದೆ ಅಕ್ಕಿಗಾಗಿ ಸಾಲುಗಟ್ಟಿ ನಿಲ್ಲುವ ಸ್ಥಿತಿ ಬಂದೊದಗಿದೆ. ಇದಕ್ಕೆ ಪ್ರಕೃತಿ ವಿಕೋಪಗಳು, ಸರಿಯಾಗಿ ಬೆಳೆ ಬಾರದೆ ನಷ್ಟ ಅನುಭವಿಸುವುದು, ಕೃಷಿಯ ವೆಚ್ಚ ದುಬಾರಿಯಾಗಿರುವುದು, ನಿರ್ವಹಣೆ ಹೆಚ್ಚಿರುವುದೇ ಕಾರಣ. ಇದಕ್ಕೆ ಪರಿಹಾರ ರೂಪಿಸಬೇಕಾದ ಜನಪ್ರತಿನಿಧಿಗಳು, ಒಕ್ಕಲಿಗರ ಸಂಘದ ಪ್ರತಿನಿಧಿಗಳು ಮಾತ್ರ ಸಮುದಾಯಕ್ಕಾಗಿ ಯಾವುದೇ ಯೋಜನೆ ರೂಪಿಸುತ್ತಿಲ್ಲ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ಎನ್.ಎಸ್.ನವೀನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕರಾದ ಎಂ.ಪಿ.ಶ್ರೀಕಾಂತ್, ಎಚ್.ಎಸ್.ಶ್ರೀಕಾಂತ್, ಲೆಕ್ಕ ಪರಿಶೋಧಕ ಎಂ.ಎಲ್.ಶಂಕರ್, ಆಗಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪದ್ಮಾ ಮೋಹನ್, ಮುಖಂಡರಾದ ಹನುಮೇಗೌಡ, ಸತ್ಯಮೂರ್ತಿ, ಜಗದೀಶ್, ಧರ್ಮರಾಜ್, ರಾಮಕೃಷ್ಣ, ರವಿಕುಮಾರ್, ಮಹೇಶ್, ನಂದೀಶ್ ಇತರರಿದ್ದರು. ಇದೇ ವೇಳೆ ರೈತರಿಗೆ ಬಿತ್ತನೆ ಬೀಜದ ಮೂಟೆಗಳನ್ನು ವಿತರಿಸಲಾಯಿತು.