

ಹುಣಸೂರು: ತಾಲೂಕು ಒಕ್ಕಲಿಗರ ಭವನ ಕಟ್ಟಡ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿಪೂಜೆ ನೆರವೇರಿಸಿದರು.
ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯಲ್ಲಿ ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಭೂಮಿಪೂಜೆ ನೆರವೇರಿಸಿದ ಈ ಸ್ಥಳವು ನಗರ ಪ್ರದೇಶದಿಂದ ಸಾಕಷ್ಟು ದೂರದಲ್ಲಿದ್ದು, ಹೀಗಾಗಿ ಇಲ್ಲಿ ನಿರ್ಮಾಣವಾಗುವ ಕಟ್ಟಡವನ್ನು ಶೈಕ್ಷಣಿಕ ಕಟ್ಟಡ ಅಥವಾ ಸಮುದಾಯ ಭವನ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಸೂಕ್ತ. ಈಗಾಗಲೇ ಮಾಜಿ ಸಂಸದ ಪ್ರತಾಪ್‌ಸಿಂಹ 50 ಲಕ್ಷ ರೂ. ಅನುದಾನವನ್ನು ಈ ಹಿಂದೆಯೇ ನೀಡಿದ್ದಾರೆ. ನಗರವ್ಯಾಪ್ತಿಯಲ್ಲಿ ನಾನು ನಿವೇಶನವೊಂದನ್ನು ನೋಡಿದ್ದು, ಸಂಪೂರ್ಣ ವೈಯಕ್ತಿಕ ಖರ್ಚಿನಲ್ಲೇ ನಿವೇಶನ ಖರೀದಿಸುವ ಇರಾದೆ ಹೊಂದಿದ್ದೇನೆ. ಅಲ್ಲಿ ಒಕ್ಕಲಿಗರ ಭವನವನ್ನು ನಿರ್ಮಿಸುವುದು ಸೂಕ್ತ ಎಂದರು.
ಮಾಜಿ ಸಂಸದ ಪ್ರತಾಪ್‌ಸಿಂಹ ಮಾತನಾಡಿ, ತಾಲೂಕಿನ ಹಿರಿಯ ಮುಖಂಡ ದಿ.ಕರಿಯಪ್ಪಗೌಡರ ಕಾಲಾವಧಿಯಲ್ಲಿ ಗುರುತಿಸಲ್ಪಟ್ಟ ಈ ನಿವೇಶನ 1.5 ಎಕರೆ ಇದ್ದದ್ದನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ 2 ಎಕರೆಗೆ ಹೆಚ್ಚಿಸಿ, 50 ಲಕ್ಷ ರೂ. ಸಂಸದರ ನಿಧಿಯಿಂದ ಅನುದಾನ ನೀಡಿದ್ದೇನೆ. ಮುಂದೆಯೂ ನನ್ನಿಂದಾಗುವ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಸಮುದಾಯ ಭವನಗಳು ಒಕ್ಕಲಿಗರಿಗೆ ಮಾತ್ರವಲ್ಲದೇ ಸಮಾಜದ ಇತರರಿಗೂ ಬಳಕೆಯಾಗುವಂತೆ ಕ್ರಮವಹಿಸಬೇಕು. ಮಾಜಿ ಸಂಸದರು ಮತ್ತು ಹಾಲಿ ಶಾಸಕರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಅಂತೆಯೇ ಸಮಾಜ ಹಿರಿಯರು, ಗಣ್ಯರೂ ಕೈಜೋಡಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸೋಣ ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್‌ಗೌಡ, ಮುಖಂಡರಾದ ಬಿ.ಎಸ್.ಯೋಗಾನಂದಕುಮಾರ್, ಹಬ್ಬನಕುಪ್ಪೆ ಜಯರಾಂ, ಕಿರಂಗೂರು ಬಸವರಾಜು, ನಂಜಪ್ಪ, ಎಚ್.ಎನ್.ರವಿಕುಮಾರ್, ಉಂಡುವಾಡಿ ಚಂದ್ರೇಗೌಡ, ಚಂದ್ರಶೇಖರ್, ಬಿಳಿಕೆರೆ ಪ್ರಸನ್ನ, ಶಶಿಕುಮಾರ್, ಸುರೇಶ್, ಸುನೀತಾ ಜಯರಾಮೇಗೌಡ ಇದ್ದರು.