

ಶ್ರೀರಂಗಪಟ್ಟಣ: ರಾಜ್ಯದಲ್ಲಿ ಶೇ.17.5ರಷ್ಟಿರುವ ಒಕ್ಕಲಿಗ ಸಮುದಾಯ ಈಗಲೂ ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದು, ಪ್ರಸ್ತುತ ಇರುವ ಶೇ.4 ಮೀಸಲಾತಿಯನ್ನು ಶೇ.10ಕ್ಕೆ ಏರಿಕೆಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಒಕ್ಕಲಿಗರ ಸಂಘದ ಸದಸ್ಯರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.
ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಒಕ್ಕಲಿಗ ಸಮುದಾಯದ ಶೇ.85ರಷ್ಟು ಜನರು ಕೃಷಿ ಅವಲಂಬಿತರಾಗಿದ್ದಾರೆ. ಬಹುಪಾಲು ಮಂದಿ ಬಡವರಾಗಿದ್ದು, ಶಿಕ್ಷಣ, ನೌಕರಿ ಹಾಗೂ ಸಮರ್ಪಕವಾಗಿ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ವಿವಿಧ ಬೇಡಿಕೆಗಳಿರುವ ಮನವಿ ಪತ್ರವನ್ನು ಉಪತಹಸೀಲ್ದಾರ್ ರೇಖಾ ಅವರಿಗೆ ಸಲ್ಲಿಸಿದರು. ಒಕ್ಕಲಿಗರ ಸಂಘದ ನಿರ್ದೇಶಕರಾದ ಬೆಳಗೊಳ ಸ್ವಾಮಿಗೌಡ, ನಗುವನಹಳ್ಳಿ ಶಿವಸ್ವಾಮಿ, ಮರಳಗಾಲ ಗುರು, ಗಂಜಾಂ ಯೋಗಣ್ಣ, ಸೋಮಶೇಖರ್, ಕೂಡಲಕುಪ್ಪೆ ರವಿಶಂಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ, ಪುರಸಭಾ ಉಪಾಧ್ಯಕ್ಷ ಗಂಜಾಂ ಕೃಷ್ಣಪ್ಪ, ಸದಸ್ಯರಾದ ಎಂ.ಎಲ್.ದಿನೇಶ್ , ಎಸ್.ಪ್ರಕಾಶ್, ರೈತ ನಾಯಕ ಡಿ.ಎಂ.ರವಿ, ಮುಖಂಡರಾದ ಬಾಬುರಾಯನಕೊಪ್ಪಲು ಸುಬ್ರಮಣ್ಯ, ವಡಿಯಾಂಡಹಳ್ಳಿ ಉದಯ್, ತಡಗವಾಡಿ ಯತೀಶ್, ಭಾರತೀಸುತ, ಕ್ಯಾಂಟೀನ್ ರವಿ, ಸಂಜಯ್, ರಾಕೇಶ್, ಕಾಯಿ ಮಹೇಶ್, ರೈತ ಸಂಘದ ನಾಗೇಂದ್ರ ಇತರರು ಭಾಗಿಯಾಗಿದ್ದರು.