ಜಮೀರ್​ ವಿರುದ್ಧ ಒಕ್ಕಲಿಗ ಸಮುದಾಯ ಆಕ್ರೋಶ

Vokkaligara Sangha
Published on

ಬೆಂಗಳೂರು:ಒಕ್ಕಲಿಗ ಸಮುದಾಯ ಮಾತ್ರವಲ್ಲದೆ, ದೇಶದ ಸವೋರ್ಚ್ಛ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಜಮೀರ್​ ಅಹಮದ್​ ಖಾನ್​ರನ್ನು ಸಂಪುಟದಿಂದ ವಜಾ ಮಾಡಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಒತ್ತಾಯಿಸಿದೆ.

ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರ ಬಣ್ಣದ ಕುರಿತು ಕೀಳಾಗಿ ಮಾತನಾಡುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ನಾಡಿನ ಜನರಿಗೂ ಅಪಮಾನ ಮಾಡಿದಂತಾಗಿದೆ. ಎರಡು ಬಾರಿ ಸಿಎಂ ಆಗಿರುವವರ ಬಗ್ಗೆ ಜನಾಂಗೀಯ ನಿಂದನೆ ಮಾಡಿರುವುದು ಅವರಿಗೆ ಶೋಭೆಯಲ್ಲ. ಸಭ್ಯತೆ ಮೀರಿ ವರ್ತಿಸುವ ಈ ವ್ಯಕ್ತಿ ಸಚಿವ ಸ್ಥಾನದಲ್ಲಿ ಮುಂದುವರಿಯಬಾರದು. ಸಿಎಂ ಸಿದ್ದರಾಮಯ್ಯ, ಸಂಪುಟದಿಂದ ವಜಾಗೊಳಿಸಬೇಕೆಂದು ಸಂಘದ ಅಧ್ಯಕ್ಷ ಸಿ.ಎನ್​. ಬಾಲಕೃಷ್ಣ ಆಗ್ರಹಿಸಿದ್ದಾರೆ.

ರಾಜಕೀಯವಾಗಿ ಟೀಕೆ, ಟಿಪ್ಪಣಿ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ವ್ಯಕ್ತಿಗತ, ಸಮಾಜದ ಹಿತಕ್ಕೆ ಧಕ್ಕೆಯಾಗದಂತೆ ಭಾಷಣ ಮಾಡಬಾರದು. ಇದು ಬಾಯಿ ತಪ್ಪಿ ಆಡಿರುವ ಮಾತಲ್ಲ. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿರುವಂತೆ ಕಾಣುತ್ತದೆ. ಇನ್ನುಮುಂದೆ ಸೌಜನ್ಯದಿಂದಾಗಿ ಮಾತನಾಡುವುದನ್ನು ಕಲಿಯಬೇಕೆಂದು ಸಚಿವರಿಗೆ ಸಂಘ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅಕ್ಷಮ್ಯ ಅಪರಾಧ: ಸಚಿವರ ಬಾಯಲ್ಲಿ ದ್ವೇಷದ ಮಾತುಗಳು ಅಕ್ಷಮ್ಯ ಅಪರಾಧವಾಗಿದೆ. ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಹೆಸರುವಾಸಿಯಾಗಿರುವ ನಾಡಿನಲ್ಲಿ ಜನಾಂಗೀಯ ನಿಂದನೆ ಮಾಡಿರುವ ಜಮೀರ್​ ಅಂಥವರನ್ನು ಸಂಪುಟದಲ್ಲಿ ಮುಂದುವರಿಸಿದರೆ, ಸರ್ಕಾರಕ್ಕೆ ಮಾತ್ರವಲ್ಲದೆ ಕಾಂಗ್ರೆಸ್​ಗೆ ಶೋಭೆಯಲ್ಲ. ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ನೈತಿಕತೆ ಉಳಿಸಿಕೊಂಡಿದ್ದರೆ ಈ ಜನಾಂಗೀಯ ದ್ವೇಷಿ ಜಮೀರ್​ನನ್ನು ಸಂಪುಟದಿಂದ ಕಿತ್ತು ಹಾಕಬೇಕೆಂದು ರಾಜ್ಯ ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಎ.ಎಚ್​.ಆನಂದ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net