

ಕುಶಾಲನಗರ: ಕೊಡಗಿನ ವಾಣಿಜ್ಯ ನಗರಿ ಹೆಗ್ಗಳಿಕೆಯ ಕುಶಾಲನಗರದಲ್ಲಿ ಸೋಮವಾರ ಎಲ್ಲೆಲ್ಲೂ ಕನ್ನಡದ ಕಲರವ ಕೇಳಿಬಂತು. ಕನ್ನಡ ಜ್ಯೋತಿ ರಥ ಯಾತ್ರೆಯ ಅದ್ದೂರಿ ಮೆರವಣಿಗೆ ಒಂದು ಕಡೆಯಾದರೆ ಶಾಲಾ-ಕಾಲೇಜುಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳು ಒಟ್ಟಿಗೆ ಕನ್ನಡ ಹಾಡುಗಳನ್ನು ಹಾಡಿ ಸಿರಿಗನ್ನಡದ ವಾತಾವರಣ ಮೂಡಿಸಿದರು.
ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ವಿವಿಧ ಸಂಘ ಸಂಸ್ಥೆಗಳು, ಕನ್ನಡ ಅಭಿಮಾನಿಗಳು ಹಾಗೂ ನಾಗರಿಕರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 5 ಸಾವಿರ ಜನರು ಪಾಲ್ಗೊಂಡು ಕನ್ನಡ ಕಂಠ ಗಾಯನವನ್ನು ಸಂಭ್ರಮಿಸಿದರು.
ಕುಶಾಲನಗರದ ರಥ ಬೀದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡ ವಿದ್ಯಾರ್ಥಿಗಳು ಕನ್ನಡ ನಾಡಗೀತೆ, ರೈತಗೀತೆ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಏಕಕಾಲದಲ್ಲಿ 5 ಸಹಸ್ರ ಕಂಠಗಳು ಏಕ ಕಂಠದ ರೀತಿಯಲ್ಲಿ ಮೊಳಗಿಸಲಾಯಿತು. ಶಿಕ್ಷಕರು, ಉಪನ್ಯಾಸಕರು, ವಿವಿಧ ಸಂಘಟನೆಗಳ ಪ್ರಮುಖರು, ನಾಗರಿಕರು ಜತೆಗೂಡಿದರು. ಪಟ್ಟಣದಾದ್ಯಂತ ಕನ್ನಡ ಧ್ವಜಗಳು, ಬಂಟಿಂಗ್ಸ್‌ಗಳು ರಾರಾಜಿಸಿದವು. ಕಂಠಸಿರಿ ಗಾಯನದಲ್ಲಿ ಕನ್ನಡಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಾಗಿ 50 ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯ ಹಾಗೂ ವರ್ಣಮಯ ಸುವರ್ಣ ಸಂಭ್ರಮವನ್ನು ಆಚರಿಸಲಾಗಿದ್ದು, ಈ ಸುವರ್ಣ ಸಂಭ್ರಮದ ಸಮಾರೋಪದ ಹೊಸ್ತಿಲಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು 5 ಸಾವಿರ ಜನರಿಂದ ಏಕಕಂಠದಿಂದ ಏಕಕಾಲದಲ್ಲಿ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಐತಿಹಾಸಿಕ ದಾಖಲೆಯ ಕಾರ್ಯಕ್ರಮಕ್ಕೆ ಕುಶಾಲನಗರ ಸಾಕ್ಷಿಯಾಯಿತು.
ಶಾಸಕ ಡಾ. ಮಂತರ್ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀಚಂದ್ರು, ಕುಶಾಲನಗರ ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್.ನಾಗೇಶ್, ತಹಸೀಲ್ದಾರ್ ಕಿರಣ್ ಗೌರಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಕುಮಾರ್, ಜನಪದ ಗಾಯಕ ಜರಗನಹಳ್ಳಿ ಕಾಂತರಾಜು, ಡಿಡಿಪಿಐ ಸಿ. ರಂಗಧಾಮಪ್ಪ, ಡಿವೈಎಸ್ಪಿ ಗಂಗಾಧರಪ್ಪ ಇತರರು ಇದ್ದರು.
ಏಳನೇ ಹೊಸಕೋಟೆಯ ಕಲಾವಿದರು ಪ್ರಸ್ತುತಪಡಿಸಿದ ಕೇರಳದ ಚೆಂಡೆ ವಾದ್ಯ ಗಮನ ಸೆಳೆಯಿತು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಶಾಸಕ ಡಾ. ಮಂತರ್ ಗೌಡ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಮತ್ತು ನಾಗರಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.