ವಿದ್ಯಾರ್ಥಿಗಳನ್ನು ಆಕರ್ಷಿಸಿದ ಪದಾವಳಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜನೆ

Vocabulary competition Mandya
Published on

ಮಂಡ್ಯ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ, ಅನನ್ಯ ಹಾರ್ಟ್ ಸಂಸ್ಥೆ, ಕನ್ನಿಕಾ ಶಿಲ್ಪಾ ನವೋದಯ ಕೇಂದ್ರ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಪದಾವಳಿ ಸ್ಪರ್ಧೆ ವಿದ್ಯಾರ್ಥಿಗಳನ್ನು ಆಕರ್ಷಿಸಿತು.

ಅರ್ಕೇಶ್ವರನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಪರ್ಧೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪದಾವಳಿಗೆ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಅಂಶಗಳನ್ನೇ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದಲೇ ಪಾಲ್ಗೊಂಡರು. ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಧು(ಪ್ರ), ಕೀರ್ತನಾ(ದ್ವಿ), ಕೌಶಿತಾ(ತೃ), ಪಾವನಾ(ನಾಲ್ಕನೇ) ಸ್ಥಾನ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸುವ ಹಾಗೂ ಇತಿಹಾಸವನ್ನು ತಿಳಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಪದಾವಳಿ ಸ್ಪರ್ಧೆ ಉತ್ತಮ ಚಟುವಟಿಕೆ. ಅಂತೆಯೇ ವಿದ್ಯಾರ್ಥಿಗಳು ದೇಶದ ಇತಿಹಾಸವನ್ನು ತಿಳಿದುಕೊಳ್ಳುವುದರ ಜತೆಗೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ಪ್ರತಿ ವರ್ಷ ಇಂತಹ ಹಲವು ವಿಭಿನ್ನ ಚಟುವಟಿಕೆಗಳನ್ನು ನಡೆಸುತ್ತದೆ. ವಿಶೇಷವಾಗಿ ಮಹಿಳಾ ಓದುಗರಿಗಾಗಿ ಆಯೋಜಿಸುವ ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿವೆ. ಆ ಚಟುವಟಿಕೆಯಲ್ಲಿ ನೂರಾರೂ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಆದ್ದರಿಂದ ಅಂತಹ ಕ್ರಿಯಾಶೀಲ ಕಾರ್ಯಕ್ರಮ ಇನ್ನೆಷ್ಟು ಆಯೋಜನೆ ಮಾಡುತ್ತಿರಲಿ ಎಂದು ಹಾರೈಸಿದರು.

ಕನ್ನಿಕಾ ಶಿಲ್ಪಾ ನವೋದಯ ಕೇಂದ್ರದ ಮುಖ್ಯಸ್ಥೆ ಎಚ್.ಆರ್.ಕನ್ನಿಕಾ, ಪ್ರಾಂಶುಪಾಲ ಶಿವರಾಮ್, ಉಪನ್ಯಾಸಕ ಮೃತ್ಯುಂಜಯ, ಡಾ.ಮನು, ಕೃಷ್ಣೇಗೌಡ, ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net