ಮಹಿಳೆಯರಿಗೆ ಉತ್ತಮ ಶಿಕ್ಷಣ ದೊರೆತರೆ ಭಾರತ ಆಧ್ಯಾತ್ಮಿಕ ಗುರು

vivekanda jayanthi
Published on

ಮೈಸೂರು: ಮಹಿಳೆಯರಿಗೆ ಉತ್ತಮ ಶಿಕ್ಷಣ ದೊರೆತರೆ ಭಾರತ ಆಧ್ಯಾತ್ಮಿಕ ಗುರುವಾಗಲಿದೆ ಎಂಬ ನಂಬಿಕೆಯನ್ನು ಸ್ವಾಮಿ ವಿವೇಕಾನಂದರು ಹೊಂದಿ ದ್ದರು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಹೇಳಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಐಕ್ಯೂಎಸಿ ಮತ್ತು ಯುವ ರೆಡ್‌ಕ್ರಾಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತೀಯ ರೆಡ್‌ಕ್ರಾಸ್ ವತಿಯಿಂದ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಹಾಗೂ ಯುವಜನರಿಗೆ ಪ್ರೋತ್ಸಾಹ ನೀಡಬೇಕು ಎಂಬುದು ಸ್ವಾಮಿ ವಿವೇಕಾನಂದರ ಅಭಿಪ್ರಾಯವಾಗಿತ್ತು. ಮಹಿಳೆಯರ ಮೇಲೆ ಸ್ವಾಮಿ ವಿವೇಕಾನಂದರಿಗೆ ಒಂದು ವಿಶೇಷವಾದ ನಂಬಿಕೆ ಇತ್ತು. ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡಿದರೆ ದೇಶ ಆಧ್ಯಾತ್ಮಿಕ ಗುರುವಾಗಲಿದೆ ಎಂದು ಅವರು ನಂಬಿದ್ದರು. ಭಾರತ ಆಧ್ಯಾತ್ಮಿಕ ಗುರುವಾಗಲು ಎಲ್ಲ ಮಹಿಳೆಯರು ಶ್ರಮಿಸಬೇಕು ಎಂದು ಕರೆ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ಕೌಟುಂಬಿ ಕಲಹಗಳು ಹೆಚ್ಚಾಗುತ್ತಿದ್ದು, ಕೌಟುಂಬಿಕ ವ್ಯವಸ್ಥೆ ಗಟ್ಟಿಗೊಳಿಸುವ ಕಾರ್ಯ ಆಗಬೇಕು. ಯಾವ ಕಾರಣಕ್ಕೆ ಇತ್ತೀಚಿಗೆ ವಿಚ್ಛೇದ ಹೆಚ್ಚಾಗುತ್ತಿದೆ ಎಂಬ ಕುರಿತು ಪ್ರತಿಯೊಬ್ಬರು ಚಿಂತಿಸಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ. ದಿನೇಶ್ ಮಾತನಾಡಿ, ಇತ್ತೀಚೆಗೆ ಕೌಟುಂಬಿಕ ಕಲಹದ ಹಲವಾರು ದೂರುಗಳು ಕೇಳಿ ಬರುತ್ತಿದ್ದು, ಕೌಟುಂಬಿಕ ಕಲಹ ಬಗೆಹರಿಸುವ ಸಲುವಾಗಿ ಜಿಲ್ಲೆಯಲ್ಲಿ 4 ನ್ಯಾಯಾಲಯಗಳು ಇವೆ. ಸಣ್ಣಪುಟ್ಟ ಕಾರಣಗಳಿಗೂ ಜನರು ವಿಚ್ಛೇದನಕ್ಕೆ ಮುಂದಾಗುತ್ತಿದ್ದು, ಸಂಸಾರದಲ್ಲಿ ಹೊಂದಾಣಿಕೆ ಅತ್ಯಂತ ಮುಖ್ಯ ಎಂದರು.

ನಮ್ಮ ಮನಸ್ಥಿತಿಗೆ ಹೊಂದುವಂತಹ ಜೋಡಿಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ನನ್ನ ಅಭಿರುಚಿ ಏನು? ನನ್ನನ್ನು ವಿವಾಹವಾ ಗುವ ವ್ಯಕ್ತಿಯ ಅಭಿರುಚಿ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಹುಡುಗ ಉತ್ತಮ ಉದ್ಯೋಗದಲ್ಲಿದ್ದಾನೆ, ಶ್ರೀಮಂತ ನಾಗಿದ್ದಾನೆ ಎಂಬ ಅಂಶವನ್ನು ಮಾತ್ರ ಗಮನಿಸಿದರೆ ಸಾಲದು. ಉತ್ತಮ ಉದ್ಯೋಗ, ಶ್ರೀಮಂತಿಕೆ ಇದ್ದ ಮಾತ್ರಕ್ಕೆ ಕೌಟುಂಬಿಕ ಕಲಹಗಳು ನಡೆಯುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ನಮ್ಮ ಅಭಿರುಚಿಗೆ ತಕ್ಕ ವ್ಯಕ್ತಿ ಸಿಕ್ಕರೆ ಜೀವನ ಸುಗಮವಾಗಿ ಸಾಗುತ್ತದೆ. ಯಾರದೋ ಒತ್ತಡಕ್ಕೆ ವಿವಾಹವಾಗುವುದು ಸರಿಯಲ್ಲ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ವಿವಾಹವಾಗುವ ವ್ಯಕ್ತಿ ಶ್ರೀಮಂತನಾಗಿರಬೇಕು, ವಿದ್ಯಾವಂತನಾಗಿರಬೇಕು, ಉತ್ತಮ ಉದ್ಯೋಗದಲ್ಲಿರಬೇಕು ಎಂದು ಬಯಸಬೇಡಿ. ಏಕೆಂದರೆ ಕೆಲವರಿಗೆ ವಿದ್ಯೆ ಇದ್ದರೂ ವಿವೇಕ ಇರುವುದಿಲ್ಲ. ಅಂತಹವರ ಜತೆಗೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರು ಕಾನೂನು ಪಾಲನೆ ಮಾಡಬೇಕು. ನಗರದಲ್ಲಿ ಸಾಕಷ್ಟು ಜನರು ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವುದನ್ನು ನಾನು ಖುದ್ದಾಗಿ ಗಮನಿಸಿದ್ದೇನೆ. ಕಾನೂನುಗಳು ಇರುವುದು ನಮ್ಮ ಒಳಿತಿಗೋಸ್ಕರ. ನಾವು ಕಾನೂನು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್. ವೈದ್ಯನಾಥ್, ಐಕ್ಯೂಎಸಿ ಸಂಚಾಲಕ ವಿ.ನಂದಕುಮಾರ್, ಯುವ ರೆಡ್‌ಕ್ರಾಸ್ ಸಂಚಾಲಕ ಡಾ.ಎಂ.ಎಸ್. ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net