

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠ ಹಿಂದು ಸನ್ಯಾಸಿಗಳಲ್ಲಿ ಒಬ್ಬರಾಗಿ ಮಾತ್ರವಲ್ಲದೆ, ದೇಶಕ್ಕಾಗಿ ತ್ಯಾಗಮಯ ಜೀವನ ನಡೆಸಿದ ಮಹಾನ್ ಹೋರಾಟಗಾರ. ಅವರ ತತ್ವ ಮತ್ತು ಸಂದೇಶಗಳು ಇಂದಿಗೂ ಇಡೀ ಜಗತ್ತಿಗೆ ಪ್ರೇರಣೆಯಾಗಿವೆ. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಒಂದೇ ಮಾತರಂ ಗುರುಕುಲದ ಸಂಯೋಜಕ ಮಧುಸೂದನ್ ಹೇಳಿದರು.
ನಗರದ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಯಿ, ತಂದೆ ಹಾಗೂ ಗುರುಗಳ ನುಡಿಗಳನ್ನು ಪಾಲಿಸುವುದು ಜೀವನದ ಮೂಲಭೂತ ಧರ್ಮವಾಗಿದೆ. ಪ್ರತಿಯೊಬ್ಬರೂ ದೇಶವನ್ನು ಪ್ರೀತಿಸಿ, ದೇಶಾಭಿಮಾನ ಬೆಳೆಸಿಕೊಳ್ಳಬೇಕು. ವಿವೇಕಾನಂದರ ಆದರ್ಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಬೇಕು ಎಂದರು.
ಶಾಲಾ ಮಕ್ಕಳಿಂದ ಭಾಷಣ, ಹಾಡು, ನೃತ್ಯ, ನಾಟಕಗಳು ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು. ವಿವೇಕಾನಂದರ ಜೀವನ ಮತ್ತು ಸಾಧನೆಗಳ ವಿಷಯವಾಗಿ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
ಶಾಲೆಯ ಕರೆಸ್ಪಾಂಡೆಂಟ್ ಗುರುರಾಜ ಅಗಡಿ, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.