ವಿವೇಕಾನಂದರ ತತ್ವಾದರ್ಶಗಳು ವಿಶ್ವಕ್ಕೆ ಮಾದರಿ

BLY- 12-3
ಬಳ್ಳಾರಿ ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಕುಲಪತಿ ಪ್ರೊ.ಅನಂತ ಎಲ್.ಝಂಡೇಕರ್, ಕುಲಸಚಿವ ರುದ್ರೇಶ್‌ಎಸ್.ಎನ್, ಡಾ.ಗೋಪಾಲ ಎನ್., ಡಾ.ಶಶಿಕಾಂತ್ ಮಜಗಿ, ಪ್ರೊ. ಸದ್ಯೋಜಾತಪ್ಪ, ಪ್ರೊ.ರಮೇಶ ಓಲೇಕಾರ್ ಇತರರಿದ್ದರು.
Published on

ಬಳ್ಳಾರಿ: ಸ್ವಾಮಿ ವಿವೇಕಾನಂದರು ಯುವಕರಿಗೆ ನೀಡಿದ ತತ್ವಗಳು ಭಾರತ ಮಾತ್ರವಲ್ಲದೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ಮಾದರಿಯಾಗಿವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ ಎನ್. ಹೇಳಿದರು.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕ ಹಾಗೂ ಬಳ್ಳಾರಿಯ ನೆಹರು ಯುವ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಯೋಗ ಮತ್ತು ಆಧ್ಯಾತ್ಮವನ್ನು ಜಗತ್ತಿಗೆ ಪರಿಚಯಿಸಿದವರು ವಿವೇಕಾನಂದರು. ಯುವಜನತೆಯಲ್ಲಿ ರಾಷ್ಟ್ರಾಭಿಮಾನ ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ವಿಚಾರಧಾರೆಗಳಿಂದ ಅಲ್ಪಸಮಯದಲ್ಲಿ ಪ್ರಪಂಚಕ್ಕೆ ಪರಿಚಿತರಾದವರು. ಸನಾತನ ಧರ್ಮದ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾನ್‌ವ್ಯಕ್ತಿ ಎಂದರು.

ರಾಷ್ಟ್ರ, ಜನಾಂಗ, ಧರ್ಮಕ್ಕೆ ಸೀಮಿತವಾಗದೆ ಸಾಧನೆಯೆ ಪ್ರತಿ ಮನುಷ್ಯನ ಗುರುತು ಎಂದು ಸಾರಿದರು. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಯುವಕರ ಸಕ್ರಿಯ ಪಾಲುದಾರಿಕೆ ಮುಖ್ಯ ಎಂಬುದು ವಿವೇಕಾನಂದರ ನಂಬಿಕೆಯಾಗಿತ್ತು. ಈ ನಿಟ್ಟಿನಲ್ಲಿ ಇಂದಿನ ಯುವಕರು ತಮ್ಮ ಸಮಯವನ್ನು ಒಳ್ಳೆಯ ವಿಚಾರಗಳಿಗಾಗಿ ಮೀಸಲಿಡಿ ಎಂದು ಹೇಳಿದರು.

ನೆಹರು ಯುವ ಕೇಂದ್ರದ ಬಳ್ಳಾರಿ ಶಾಖೆಯ ಅಧಿಕಾರಿ ಮೊಂತು ಪತ್ತಾರ್ ಮಾತನಾಡಿ, ಏಳು, ಎದ್ದೇಳು, ನಿನ್ನಲ್ಲಿರುವ ಸಾಮರ್ಥ್ಯ ಅರಿತುಕೊಳ್ಳು ಎನ್ನುವುದು ಈ ವರ್ಷದ ರಾಷ್ಟ್ರೀಯ ಯುವ ದಿನದ ಘೋಷವಾಕ್ಯವಾಗಿದೆ. ಪ್ರಪಂಚದಲ್ಲಿ ಅತಿಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಭಾರತದ ಯುವಕರು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಆಗ ಮಾತ್ರ ಭಾರತ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ವಿವಿ ಕುಲಸಚಿವ ರುದ್ರೇಶ್‌ಎಸ್.ಎನ್ ಮಾತನಾಡಿ, ವಿವೇಕಾನಂದರ ತತ್ವ ಆದರ್ಶಗಳು ಇಂದಿಗೂ ಪ್ರಪಂಚದಾದ್ಯಂತ ಪ್ರಸ್ತುತವಾಗಿವೆ. ಯುವಕರು ಅವುಗಳನ್ನು ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಯಶಸ್ವಿ ವ್ಯಕ್ತಿಯಾಗಬಹುದು. ಯುವಕರು ಜಾತಿ, ಧರ್ಮ ಮೀರಿ ಬೆಳೆಯಬೇಕು. ರಾಷ್ಟ್ರೀಯತೆಯ ಮೂಲಕ ದೇಶಿಯ ಸಂಸ್ಕೃತಿಯನ್ನು ಪಾಲನೆ ಮಾಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಅನಂತ ಎಲ್.ಝಂಡೇಕರ್ ಮಾತನಾಡಿ, ನಿಷ್ಕಲ್ಮಶ ಹೃದಯವಿದ್ದಲ್ಲಿ ಅಲ್ಲಿ ದೇವರು ಇರುತ್ತಾನೆ ಎಂದು ವಿವೇಕಾನಂದರ ಮಾತನ್ನು ಸ್ಮರಿಸಿದರು. ಯುವ ಜನತೆಗೆ ನೀಡಿದ ಅವರ ತತ್ವಗಳು ಎಂದೆಂದಿಗೂ ಯುವಕರಿಗೆ ಸ್ಫೂತಿಯಾಗಿವೆ ಎಂದರು.

ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಡಾ.ಶಶಿಕಾಂತ್ ಎಚ್ ಮಜಗಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ ಓ.ಓಲೇಕಾರ್, ಹಣಕಾಸು ಅಧಿಕಾರಿ ಪ್ರೊ. ಸದ್ಯೋಜಾತಪ್ಪ, ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಶಿಧರ ಕೆಲ್ಲೂರ್, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net