

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ವಿವೇಕಾನಂದರ ಜೀವನದ ಆದರ್ಶ ಮತ್ತು ಮೌಲ್ಯ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅಳವಡಿಕೆಯಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಸ್ವಯಂ ಶಕ್ತಿಯಿಂದ ಬದುಕುವ ಶಿಕ್ಷಣ ದೊರೆಯಬೇಕು. ಅಂತಹ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವಂತಿರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾಲೇಜು ವಿದ್ಯಾರ್ಥಿ ಪ್ರಮುಖ ರವಿಪ್ರಸಾದ್ ಕಲ್ಮಂಜ ಹೇಳಿದರು.
ಸೋಮವಾರ ಪ್ರಜ್ಞೆಯೊಂದಿಗೆ ಪ್ರಗತಿ, ವಿಕಸಿತ ಭಾರತಕ್ಕಾಗಿ ಎಂಬ ವಿಷಯದ ಕುರಿತು ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ವೇದವ್ಯಾಸ ಧ್ಯಾನ ಮಂಟಪದಲ್ಲಿ ವಿವೇಕಾನಂದ ಜಯಂತಿಯ ಕಾರ್ಯಕ್ರಮದ ಬೌದ್ಧಿಕ್ ನೀಡಿದರು.
ಬೆಳ್ತಂಗಡಿ ಶಾಖೆಯ ಎಲ್‌ಐಸಿ ಆಫ್ ಇಂಡಿಯಾದ ಪ್ರಬಂಧಕ ವಿ.ಎಸ್.ಕುಮಾರ್ ಉದ್ಘಾಟಿಸಿದರು. ಶಾಲಾ ಆಡಳಿತ ಸಮಿತಿ ಸದಸ್ಯ ಜನಾರ್ಧನ ಕಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಂಚಾಯತ್ ರಾಜ್ ಇಲಾಖೆ ಬೆಳ್ತಂಗಡಿಯ ಸಹಾಯಕ ಇಂಜಿನಿಯರ್ ಸಂದೀಪ್ ಎಸ್.ಉಪಸ್ಥಿತರಿದ್ದರು.
ಶಾಲೆಯ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಹಾಗೂ ಯಕ್ಷಗಾನ ಗುರು ಈಶ್ವರ ಪ್ರಸಾದ ನಿಡ್ಲೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಸರಸ್ವತಿ ವಂದನೆಮಾಡಿದರು. ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಸ್ವಾಗತಿಸಿದರು. ಮುಖ್ಯಶಿಕ್ಷಕ ಚಂದ್ರಶೇಖರ ಶೇಟ್ ವಂದಿಸಿದರು. ಸಹಶಿಕ್ಷಕಿ ಶುಭಲಕ್ಷ್ಮೀ ನಿರೂಪಿಸಿದರು.