ಯುವ ಸಮೂಹಕ್ಕೆ ಸ್ಪೂರ್ತಿ ವಿವೇಕಾನಂದರು

26-hvr-03
Published on

ಹಾವೇರಿ: ಸ್ವಾಮಿ ವಿವೇಕಾನಂದರು ಜಗತ್ತಿನ ಎಲ್ಲ ಯುವ ಸಮೂಹಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದು ನೆಗಳೂರ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಹಿರೇಮಠದಲ್ಲಿ ಯುವ ಬ್ರಿಗೇಡ್ ಹಾಗೂ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಕ್ ಡೇ ಹಾಗೂ ವಿವೇಕ ಮಾಲಾಧಾರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿವೇಕ ಎಂದರೆ ಜ್ಞಾನ. ಅಂತಹ ಜ್ಞಾನವನ್ನು ಹೊಂದಿ ಜಗತ್ತಿಗೆ ಭಾರತದ ಜ್ಞಾನವನ್ನು ಪಸರಿಸಿ ಅವರನ್ನು ತಮ್ಮಂತೆಯೇ ಜ್ಞಾನವಂತರನ್ನಾಗಿಸಲು ಪ್ರಯತ್ನಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ನಾವು ಇಂದು ಪಾಶ್ಚಿಮಾತ್ಯ ಸಂಸ್ಕೃತಿಗಳ ಆಚರಣೆಗೆ ಮರುಳಾಗಿದ್ದೇವೆ. ಆದರೆ, ನಮ್ಮ ದೇಶೀಯ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಅರಿವಿಲ್ಲದಿರುವುದು ವಿಷಾದದ ಸಂಗತಿ ಎಂದರು.

ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿ ಸಮುದ್ರ ದಂಡೆಯ ಬಳಿಯಿದ್ದ ಬಂಡೆಯ ಮೇಲೆ ಧ್ಯಾನಾಸಕ್ತರಾದ ದಿನವನ್ನು ಯುವ ಬ್ರಿಗೇಡ್ ವಿಶೇಷವಾಗಿ ರಾಕ್ ಡೇ ವಿವೇಕ ಮಾಲೆ ಹೆಸರಿನಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ವಿವೇಕ ಮಾಲೆ ಧರಿಸಿದರೆ ಜ್ಞಾನವನ್ನೇ ಧರಿಸಿ ವಿವೇಕದಿಂದ ಜೀವನ ವಿಕಸನದತ್ತ ಸಾಗುವುದು ಎಂದರು.

ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಭಿಷೇಕ ಉಪ್ಪಿನ ಮಾತನಾಡಿ, ಯುವ ಬ್ರಿಗೇಡ್ ನಿಸ್ವಾರ್ಥ ಮನೋಭಾವವುಳ್ಳ ರಾಷ್ಟ್ರಾಭಿಮಾನ ಬೆಳೆಸುವ, ತಿಳಿಸುವ ಸಂಘಟನೆಯಾಗಿದೆ. ಕಳೆದ 6 ವರ್ಷಗಳಿಂದ ಡಿ. 25ರಂದು ರಾಕ್ ಡೇ ವಿವೇಕ ಮಾಲೆ ಆಚರಣೆ ಮಾಡಲಾಗುತ್ತಿದೆ ಎಂದರು.

ಧಾರವಾಡ ವಿಭಾಗ ಸಂಚಾಲಕ ವರ್ಧಮಾನ ತ್ಯಾಗಿ ಮಾತನಾಡಿ, ರಾಕ್ ಡೇ ವಿವೇಕ ಮಾಲೆಯ ಹಿನ್ನೆಲೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ 120 ಯುವಕರು ಪೂಜ್ಯರಿಂದ ಮಾಲೆ ಧಾರಣೆ ಮಾಡಿಸಿಕೊಂಡರು. ತಾಲೂಕ ಸಂಚಾಲಕ ಮೃತ್ಯುಂಜಯ ರಿತ್ತಿಮಠ, ಅಮರ ಗಂಗನಗೌಡ್ರ, ಕುರುವತ್ತೆಪ್ಪ ಹೊಸಮನಿ, ಈಶ್ವರ ಶಿಡೇನೂರ, ನಾಗರಾಜ ಮಠಪತಿ, ಶಂಕರಗೌಡ ಸುಕಳಿ, ವಿಶ್ವನಾಥ ದಡ್ಡಿ, ಮೃತ್ಯುಂಜಯ ಹುಚ್ಚಬಸಪ್ಪನವರ, ಯಲ್ಲಪ್ಪ ಕಿವುಡಿ, ಕುಮಾರ ಕಟ್ಟೆಪ್ಪನವರ, ಸಂಜಯಗಾಂಧಿ ಸಂಜೀವಣ್ಣನವರ, ಹಿಂದು ಜಾಗರಣ ವೇದಿಕೆ, ಭಗತ್​ಸಿಂಗ್ ಸ್ನೇಹ ಸಮಿತಿ, ಡ್ರೀಮ್ ನೆಗಳೂರ ಯುತ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು. ಮಠದ ಪಾಠ ಶಾಲಾ ವಟುಗಳಿಂದ ವೇದಘೊಷ ಜರುಗಿತು. ಮಂಜುನಾಥ ಯರವಿನತೆಲೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net