

ಹುಬ್ಬಳ್ಳಿ: ಭಾರತ ವಿಶ್ವಗುರುವಾಗಿ ನೋಡಬೇಕೆಂಬ ಕನಸು ಸ್ವಾಮಿ ವಿವೇಕಾನಂದರಿಗಿತ್ತು. ನಾವೆಲ್ಲರೂ ಅವರ ಕನಸಸು ನನಸು ಮಾಡಲು ಪ್ರಯತ್ನಿಸೋಣ. ಅವರ ಭರವಸೆ ಯುವ ಜನತೆ ಮೇಲಿದೆ. ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡು ಆದಷ್ಟು ಬೇಗ ನಮ್ಮ ಭಾರತ ವಿಶ್ವ ಗುರುವಾಗಿಸೋಣ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಹೇಳಿದರು.
ಇಲ್ಲಿಯ ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರ ಚಿಂತನೆಗಳಿಗೆ ಎಷ್ಟೊಂದು ಶಕ್ತಿ ಇರುತ್ತದೆ ಎಂದರೆ ಅದಕ್ಕೆ ಉತ್ತಮ ಉದಾಹರಣೆ ನಾನು. ಕೇವಲ ನಾಲ್ಕಾರು ರೂಪಾಯಿ ಜತೆಗೆ ಒಂದು ಸ್ಕೂಟರ್ ತೆಗೆದುಕೊಂಡು ಹುಬ್ಬಳ್ಳಿಗೆ ಬಂದ ನಾನೀಗ ಒಬ್ಬ ದೊಡ್ಡ ಉದ್ಯಮಿಯಾಗಿ ನಿರ್ಮಾಣವಾಗಿರುವುದಕ್ಕೆ ವಿವೇಕಾನಂದರ ಶಕ್ತಿಯೇ ಕಾರಣ. ಪ್ರಬಲ ಇಚ್ಛಾಶಕ್ತಿ, ಸಾಧಿಸಿಯೇ ತಿರುವೆನೆಂಬ ಆತ್ಮ ವಿಶ್ವಾಸ ಹೊಂದಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದರು.
ಮುಖ್ಯ ಭಾಷಣಕಾರ ರಮೇಶ ಉಮರಾಣಿ ಮಾತನಾಡಿ, ಪವಿತ್ರತೆ, ಪರಿಶುದ್ಧತೆ, ಪ್ರಾಮಾಣಿಕತೆ ಗುಣಗಳು ನಮ್ಮಲ್ಲಿದ್ದರೆ ಖಂಡಿತವಾಗಿಯೂ ನಾವು ಮಹತ್ತರ ಕಾರ್ಯ ಸಾಧಿಸಲು ಸಾಧ್ಯ ಎಂದರು.
ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ತೇಜಸಾನಂದಜಿ ಮಹಾರಾಜ, ಶ್ರೀ ಸ್ವಾಮಿ ಬುದ್ಧಿಯೋಗಾನಂದಜಿ ಮಹಾರಾಜ, ಶ್ರೀ ಸ್ವಾಮಿ ಗುರುದೇವಚರಣಾನಂದಜಿ ಮಹಾರಾಜ ಭಜನೆ ನೆರೆವೇರಿಸಿದರು.
ಇವರೊಂದಿಗೆ ಡಾ. ನಾಗಲಿಂಗ ಮುರಗಿ ತಬಲಾ ಸಾಥ್ ನೀಡಿದರು.
ಆಶ್ರಮದ ಧರ್ಮದರ್ಶಿ ಸಂಭಾಜಿ ಕಲಾಲ, ಸಂಗಣ್ಣ ಬೆಳಗಾವಿ ಸೇರಿದಂತೆ ಸುಮಾರು ಎಂಟು ಕಾಲೇಜ್‌ಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ವಿನಾಯಕ ಕುಲಕರ್ಣಿ ನಿರೂಪಿಸಿದರು. ದಯಾನಂದ ರಾವ್ ವಂದಿಸಿದರು.