

ಸಂಕೇಶ್ವರ: ಇಂದಿನ ಯುವಜನರಿಗೆ ಸ್ವಾಮಿ ವಿವೇಕಾನಂದರ ಆದರ್ಶ ಪ್ರೇರಣೆಯಾಗಿವೆ ಎಂದು ಬೆಳಗಾವಿಯ ತಜ್ಞ ವೈದ್ಯ ಡಾ.ವರದರಾಜ ಗೋಕಾಕ ಹೇಳಿದರು.
ಪಟ್ಟಣದ ವಿಶ್ವಚೇತನ ವಿದ್ಯಾ ಸಂಸ್ಥೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯುತ್ಸವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಇತಿಹಾಸ ಸೃಷ್ಟಿಸಲು ಹೊರಟವರಿಗೆ ಇತಿಹಾಸದ ಅರಿವಿರಬೇಕು. ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಮೌಲ್ವಿಕ ಚಿಂತನೆ ತುಂಬುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಿಪಿಐ ಶಿವಶರಣ ಅವಜಿ ಮಾತನಾಡಿ, ವಿದ್ಯಾರ್ಥಿಗಳು ಸನ್ನಡತೆ, ಸಚ್ಯಾರಿತ್ರೃದ ಮೂಲಕ ಸುಂದರ ಸಮಾಜದ ನಿರ್ಮಾತೃಗಳಾಗಬೇಕು ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಮಹೇಶ ದೇಸಾಯಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದೊಟ್ಟಿಗೆ ಸಂಸ್ಕೃತಿ, ಸಂಸ್ಕಾರದ ಬೋಧನೆ ಮಾಡಬೇಕು ಎಂದು ಹೇಳಿದರು. ಕಾರ್ಯದರ್ಶಿ ಎಂ.ಕೆ.ಪಾಟೀಲ ಮಾತನಾಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಜರುಗಿದವು. ಕಾಡಗೌಡ ಪಾಟೀಲ, ಅಶೋಕ ನೇರ್ಲಿ, ಸುರೇಖಾ ಪಾಟೀಲ, ಸುಷ್ಮಾ ಪಾಟೀಲ, ಮುಖ್ಯ ಶಿಕ್ಷಕ ಮಹೇಶ ಮಗೆಪ್ಪಗೋಳ, ಆನಂದ ಚಾಟೆ, ಸವಿತಾ ಮೋರೆ, ಎಲ್.ಸಿ.ಘಾಟೆ ಇತರರು ಇದ್ದರು.