

ದಾವಣಗೆರೆ: ಸ್ವಾಮಿ ವಿವೇಕಾನಂದರು, ಸುಭಾಷ್ ಚಂದ್ರ ಬೋಸ್ ಇಬ್ಬರಲ್ಲೂ ಭಾರತೀಯ ಪರಂಪರೆ ಬಗ್ಗೆ ಅಪಾರ ಅಭಿಮಾನವಿತ್ತು. ಹಾಗಾಗಿಯೇ ಅವರು ಜಾಗತಿಕ ಮಟ್ಟದಲ್ಲಿ ಭಾರತೀಯತೆ ಎತ್ತಿ ಹಿಡಿದರು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ದಾವಣಗೆರೆಯ ಮಿತ್ರಮಂಡಳಿ ಭಾನುವಾರ ಸ್ವಾಮಿ ವಿವೇಕಾನಂದ ಹಾಗೂ ಸುಭಾಷ್‌ಚಂದ್ರ ಬೋಸ್ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ವೀರ ಭಾರತ ಧೀರ ಪಥ’ ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿದರು.
ಇಡೀ ಜಗತ್ತು ತುಚ್ಛವಾಗಿ ಕಾಣುತ್ತಿದ್ದ ಭಾರತವನ್ನು ಸರ್ವ ಶ್ರೇಷ್ಠವನ್ನಾಗಿಸಿದ್ದು ಸ್ವಾಮಿ ವಿವೇಕಾನಂದ ಮತ್ತು ಸುಭಾಷ್ ಚಂದ್ರ ಬೋಸ್ ಎಂಬ ಎರಡು ಅಪರೂಪದ ವ್ಯಕ್ತಿತ್ವಗಳು ಎಂದು ಬಣ್ಣಿಸಿದರು.
ವಿವೇಕಾನಂದರು ದೇಶ ಸುತ್ತಿದಾಗ ಅತಿ ಯಾತನೆ ಎದುರಿಸಿದರು. ವಿಶ್ವ ಧರ್ಮ ಸಮ್ಮೇಳನದ ವೇದಿಕೆ ಹತ್ತುವುದೂ ಕಷ್ಟವಾಗಿತ್ತು. ಆದರೂ ಅವರಲ್ಲಿ ಆತ್ಮವಿಶ್ವಾಸ ಸದಾ ಜಾಗೃತವಾಗಿತ್ತು. ಕಷ್ಟಗಳು ಬಂದಾಗಲೂ ಹಿಂಜರಿಯಲಿಲ್ಲ. ಅಂತಹ ಧೀಮಂತ ಶಕ್ತಿ ಅವರಲ್ಲಿತ್ತು ಎಂದು ಬಣ್ಣಿಸಿದರು.
ಗೋದ್ರಾದಲ್ಲಿ 59 ಮಂದಿ ಕರ ಸೇವಕರು ಜೀವಂತವಾಗಿ ದಹಿಸಲ್ಪಟ್ಟಾಗ ಪ್ರತಿರೋಧ ನಡೆಯಿತು. ಆಗಿನ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರನ್ನು ವಿಚಾರಣೆ ನಡೆಸಿದ ಎಸ್‌ಐಟಿ, ಸುಪ್ರೀಂ ಕೋರ್ಟ್ ಕ್ಲೀನ್‌ಚಿಟ್ ನೀಡಿದ್ದರೂ ಅವರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಭಾರತವನ್ನು ಆಂತರಿಕವಾಗಿ ಧ್ವಂಸ ಮಾಡುವ ನಿಟ್ಟಿನಲ್ಲಿ ಇನ್ನೂ ಕೆಲವು ವರದಿ ಬರಲಿವೆ. ಭಾರತೀಯರು ಅಂತಹ ಅಪಪ್ರಚಾರ ವರದಿಯ ಹಿಂದಿನ ರಹಸ್ಯ ತಿಳಿಯಬೇಕು. ಇಲ್ಲವಾದಲ್ಲಿ ಕಷ್ಟ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ರಾಮಕೃಷ್ಣಾಶ್ರಮದ ಅಧ್ಯಕ್ಷ ತ್ಯಾಗೀಶ್ವರಾನಂದ ಜೀ ಮಾತನಾಡಿ, ವಿವೇಕಾನಂದರು ಪರಕೀಯರ ದಾಸ್ಯದಲ್ಲಿದ್ದ ಭಾರತವನ್ನು ವಿಶ್ವದಲ್ಲೇ ಎತ್ತರಕ್ಕೆ ಕರೆದೊಯ್ದರು. ನೇತಾಜಿ ಅವರನ್ನೇ ಅನುಸರಿಸಿದರು. ತೀಕ್ಷ್ಣ್ಣ ಬುದ್ಧಿವಂತಿಕೆ, ಅಪರಿಮಿತ ದೇಶಪ್ರೇಮ ಹೊಂದಿದ್ದ ಇಬ್ಬರೂ ಒಂದು ನಾಣ್ಯದ ಎರಡು ಮುಖಗಳು ಎಂದರು.
ವಿವೇಕಾನಂದರು ಯುವ ಜನಾಂಗದ ಶಕ್ತಿ ಜಾಗೃತಗೊಳಿಸಿದರು. ನಮಗೆ ಬೇಕಿರುವ ರಾಷ್ಟ್ರೀಯ ಭಾವನೆ, ನಾವೆಲ್ಲಾ ಒಂದು ಎನ್ನುವ ದಿವ್ಯೌಷಧ ನೀಡಿದರು. ಭಾರತವನ್ನು ಪ್ರಪಂಚದಲ್ಲಿಯೇ ಶ್ರೇಷ್ಠ ರಾಷ್ಟ್ರ ಎಂದು ಬಿಂಬಿಸಿದ್ದರು. ಆದರೆ ಈಗ ಇಂತಹ ಶ್ರೇಷ್ಠ ಭಾರತದಲ್ಲಿ ನಮ್ಮ ಜವಾಬ್ದಾರಿ ಏನಾಗಿದೆ? ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗುಂಡಿ ರಾಜಶೇಖರ್, ಎಚ್‌ಪಿ.ವಿಶ್ವಾಸ್ ಇದ್ದರು.