

ಹುಬ್ಬಳ್ಳಿ: ರಾಣೆಬೆನ್ನೂರು ಮೂಲದ 55 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ ಗರ್ಭಕೋಶದ ಅಸಾಧಾರಣ ಕ್ಯಾನ್ಸರ್ (ನ್ಯುಮಯೋ ಸರ್ಕೋಮಾ) ಗಡ್ಡೆಯ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ, ಇಲ್ಲಿನ ದೇಶಪಾಂಡೆ ನಗರದ ವಿವೇಕಾನಂದ ಜನರಲ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಮಂಗಳವಾರ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾನ್ಸರ್ ಶಸ್ತ್ರ ಚಿಕಿತ್ಸ ತಜ್ಞ ಡಾ. ಶಶಿಧರ ಕೆ. ಅವರು, ಹೊಟ್ಟೆ ನೋವು-ಬಾವು ಇದೆ ಎಂದು ಮಹಿಳೆಯು ಏ. 5ರಂದು ಆಸ್ಪತ್ರೆಗೆ ಆಗಮಿಸಿದ್ದರು. ತಪಾಸಣೆ ನಡೆಸಿದ ವೈದ್ಯರು, ಹೊಟ್ಟೆಯಲ್ಲಿ ವಿರಳ ಗಡ್ಡೆ ಇರುವುದು ಗುರುತ್ತಿದ್ದರು. ಸಿಟಿ ಸ್ಕಾೃನ್, ಆಲ್ಟ್ರಾಸೌಂಡ್ ಸೇರಿ ಇತರ ತಪಾಸಣೆ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಸಾಬೀತಾಗಿತ್ತು ಎಂದರು.
ಏ. 7ರಂದು ನಾನು, ಕ್ಯಾನ್ಸರ್ ಶಸ್ತ್ರ ಚಿಕಿತ್ಸ ತಜ್ಞ ಡಾ. ಸಂಜಯ ಪವಾರ್, ಅರಿವಳಿಕೆ ತಜ್ಞ ಡಾ. ಶೀತಲ್ ಹಿರೇಗೌಡರ ಹಾಗೂ ಸಿಬ್ಬಂದಿ ಸಾಥ್ ನೀಡಿದ್ದರ ಪರಿಣಾಮ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು. ಸತತ 3 ತಾಸು ಶಸ್ತ್ರ ಚಿಕಿತ್ಸೆ ನೆರವೇರಿಸಿದ ಬಳಿಕ ಹೊಟ್ಟೆಯಲ್ಲಿದ್ದ 7.8 ಕೆ.ಜಿ. ಗಡ್ಡೆ ಹೊರತೆಗೆಯಲಾಗಿದೆ. ಈಗ ಈ ಮಹಿಳೆಯು ಗುಣವಾಗಿದ್ದು, ಡಿಸ್ಚಾರ್ಜ್ ಮಾಡಲಾಗಿದೆ ಎಂದರು.
ಗರ್ಭಕೋಶ ಕ್ಯಾನ್ಸರ್ ಪೀಡಿತರಲ್ಲಿ ಶೇ. 2ರಷ್ಟು ಇಂಥ ಪ್ರಕರಣಗಳು ಪತ್ತೆಯಾಗುತ್ತವೆ. ಇದು ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಶಸ್ತ್ರ ಚಿಕಿತ್ಸೆ ಇರಬಹುದು ಎಂದು ಅವರು ಹೇಳಿದರು.
ಆಸ್ಪತ್ರೆ ಸಿಇಒ ರಾಹುಲ್ ಮುನಗೇಕರ, ವೈದ್ಯಕೀಯ ಮುಖ್ಯಸ್ಥೆ ಡಾ. ಮಂಜುಳಾ ಹುಗ್ಗಿ ಸುದ್ದಿಗೋಷ್ಠಿಯಲ್ಲಿದ್ದರು.