ಬಿಜೆಪಿಗೆ ‘ಕೈ’ಕೊಟ್ಟ ವಿವೇಕ ಹೆಬ್ಬಾರ

Hebbara
Published on

ಶಿರಸಿ: ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ ಅವರು ಗುರುವಾರ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದಾರೆ. ತಾಲೂಕಿನ ಬನವಾಸಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ 500ಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಕೈ ಹಿಡಿದರು.

ಬಳಿಕ ಮಾತನಾಡಿ, ಬಿಜೆಪಿ ಕಾರ್ಯಕರ್ತರನ್ನು ಹಾಗೂ ನಾಯಕರನ್ನು ನಡೆಸಿಕೊಂಡ ರೀತಿಯಿಂದ ಬೇಸರಗೊಂಡು ಮೂಲ ಪಕ್ಷ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದೇವೆ. ಕಳೆದ ನಾಲ್ಕೈದು ತಿಂಗಳಿಂದ ಹೆಬ್ಬಾತ ಅವರು ಬಿಜೆಪಿ ತೊರೆಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಬಿಜೆಪಿಗೆ ಈ ಹಿಂದೆ ಸೇರಿ ಸರ್ಕಾರ ತಂದೆವು, ಆದರೆ ನಂತರ ಅವರು ನಮ್ಮೊಂದಿಗೆ ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಮಾತನಾಡಿ, ದೇಶಾದ್ಯಂತ ಬಿಜೆಪಿಯ ಸರ್ವಾಧಿಕಾರದ ನಡೆಯನ್ನ ಸರಿಪಡಿಸಲು ಪರಿವರ್ತನೆ ಪ್ರಾರಂಭವಾಗಿದೆ. ಪಕ್ಷಕ್ಕೆ ಬಂದವರು ಇಂದಿನಿಂದಲೇ ಸಂಘಟನೆ ಮಾಡಲು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ನಾಯಕರು ರಾಜ್ಯದ 28 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಮೊದಲು ಅಧಿಕಾರ ಉಳಿಸಿಕೊಳ್ಳಲು ಅವರು ನೋಡಲಿ, ಬಡವರಿಗೆ ಸಹಾಯ ಮಾಡಿದರೆ ಬಿಟ್ಟಿ ಭಾಗ್ಯ ಎನ್ನುತ್ತಾರೆ, ಅಂಬಾನಿ ಅಧಾನಿ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿದರೆ ಅದು ಯಾವ ಭಾಗ್ಯವೆಂದು ಬಿಜೆಪಿಗರು ಹೇಳಲಿ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ, ವಿವೇಕ ಹೆಬ್ಬಾರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಕಾಂಗ್ರೆಸ್ ಜಾತ್ಯಾತೀತ ಪಕ್ಷ, ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ನೋಡುವ ಪಕ್ಷ. ಜಾತ್ಯಾತೀತ ರಾಷ್ಟ್ರ ನಿರ್ವಣಕ್ಕೆ ಕಾಂಗ್ರೆಸ್ ಪ್ರಮುಖ ಕಾರಣವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್. ನಾಯ್ಕ, ಮಾಜಿ ಸೇವಾದಳ ಮುಖ್ಯಸ್ಥ ಶಂಕರ ಗೌಡ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಆರ್.ಎಚ್. ನಾಯ್ಕ, ರವಿ ನಾಯ್ಕ, ದ್ಯಾಮಣ್ಣ ದೊಡ್ಮನಿ, ಬಸವರಾಜ ದೊಡ್ಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net