ವಿಠ್ಠಲ-ರುಕ್ಮಿಣಿ ದಿಂಡಿ ಉತ್ಸವ

11 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಕೋಟೂರ ಗ್ರಾಮದ ಪಾಂಡುರಂಗ ದೇವಾಲಯದಲ್ಲಿ ಚಾಂಗದೇವರ ಮಹಾರಾಜರ ಪುಣ್ಯಸ್ಮರಣೆ ನಿಮಿತ್ತ ವಿಠ್ಠಲ-ರುಕ್ಮಿಣಿ ದಿಂಡಿ ಉತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ದಿಂಡಿ ಉತ್ಸವದ ನಿಮಿತ್ತ ಬೆಳಗ್ಗೆ ವಿಠ್ಠಲ-ರುಕ್ಮಿಣಿ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಅಲಂಕಾರ, ಪೂಜೆ, ಕಾಕಡಾರತಿ ನೆರವೇರಿಸಲಾಯಿತು. ಪ್ರವಚನ, ಕೀರ್ತನೆ, ಭಜನೆ, ಜ್ಞಾನೇಶ್ವರಿ ಪಾರಾಯಣ ಮಾಡಲಾಯಿತು.

ಪಲ್ಲಕ್ಕಿ ಉತ್ಸವದಲ್ಲಿ ವಿಠ್ಠಲ-ರುಕ್ಮಿಣಿ ಹಾಗೂ ಸಂತ ಜ್ಞಾನೇಶ್ವರಿ ಕೃತಿ ಪ್ರತಿಷ್ಠಾಪಿಸಿ, ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಸಂತ ಸಮೂಹ ಬಾಳ, ಗೋಪಾಳ, ತಾಳ, ಮೃದಂಗ ಬಾರಿಸುತ್ತ ಅಭಂಗಗಳನ್ನು ಹಾಡಿ ಕುಣಿದು ಕುಪ್ಪಳಿಸಿದರು. ದಾರಿಯುದ್ದಕ್ಕೂ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದಲ್ಲಿ ಕಾಲಾ ಕೀರ್ತನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.

ವಿಠ್ಠಲ ಮಹಾರಾಜ ಕಾಟೇನವರ, ರುದ್ರಪ್ಪ ಕೌದೇಣ್ಣವರ, ರುದ್ರಪ್ಪ ಗಿರಿಯಾಲ, ಸೋಮಲಿಂಗ ಸುತ್ತಗಟ್ಟಿ, ನಿಂಗಪ್ಪ ಉಪ್ಪಿನ, ಯಲ್ಲಪ್ಪ ಮಾಳಗಿ, ಕೃಷ್ಣ ನವಲೂರ, ಗಣೇಶ ಪಾರಕ್ಕನವರ, ನಂದಾ ಜೋಶಿ, ಮೋಹನ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net