

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಯಾರೂ ಇಲ್ಲದ ಮನೆಯ ಮುಂಬಾಗಿಲನ್ನು ಮುರಿದು, ಕಳವಿಗೆ ಪ್ರಯತ್ನ ಮಾಡಿ ಏನೂ ಸಿಗದಿದ್ದಾಗ ಸಿಸಿ ಕ್ಯಾಮರಾದ ಡಿ.ವಿ.ಆರ್. ಅನ್ನೇ ಹೊತ್ತೊಯ್ದಿದ್ದಾರೆ.
ಪರ್ತಿಪ್ಪಾಡಿಯ ಮನೆ ಎಂ. ಕೆ. ಖಲೀಲ್ ಎಂಬುವರಿಗೆ ಸೇರಿದ್ದಾಗಿದ್ದು, ಅವರು ತನ್ನ ಕುಟುಂಬದೊಂದಿಗೆ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿ ವಾಸವಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದಾರೆ.
ಭಾನುವಾರ ಬೆಳಗ್ಗೆ ಮನೆಯ ಬಾಗಿಲು ತೆರೆದಿರುವುದನ್ನು ಪಕ್ಕದ ಮನೆಯವರು ಗಮನಿಸಿ ಸಂಶಯಗೊಂಡಿದ್ದಾರೆ. ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದಿಕ್ಕು ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಹವಾನಿಯಂತ್ರಿತ ವ್ಯವಸ್ಥೆಯನ್ನು ಚಾಲೂ ಮಾಡಿದ್ದರೆ. ಮನೆಯಲ್ಲಿದ್ದ ನಾಲ್ಕು ಕಪಾಟುಗಳನ್ನು ಒಡೆದು ಸೊತ್ತುಗಳಿಗಾಗಿ ಗಂಟೆಗಳ ಕಾಲ ಜಾಲಾಡಿರುವಂತಿದೆ. ಕಪಾಟಿನಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ರಾಡೋ ವಾಚ್ ನಾಪತ್ತೆಯಾಗಿದೆ.
ಸೊತ್ತುಗಳಿಗಾಗಿ ಜಾಲಾಡಿದ ಕಳ್ಳರು ಮರಳಿ ಹೋಗುವ ಸಂದರ್ಭ ತಮ್ಮ ಸಾಕ್ಷ್ಯ ಉಳಿಯಬಾರದೆಂಬ ಕಾರಣದಿಂದ ಡಿ. ವಿ. ಆರ್ ಹೊತ್ತೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.