ಅಭಿವೃದ್ಧಿಯ ವಿಚಾರದಲ್ಲಿ ರಾಜಿಯಿಲ್ಲ VITTAL

ವಿಟ್ಲ ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಯ ಸಾಧಕ-ಭಾದಕಗಳನ್ನು ಚರ್ಚಿಸಲು ಶನಿವಾರ ಕಟ್ಟಡಗಳ ಮಾಲೀಕರ ಸಭೆ ನಡೆಯಿತು. ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿದರು. ಕರುಣಾಕರ ನಾಯ್ತೊಟ್ಟು, ಸಂಗೀತಾ ಪಾಣೆಮಜಲು, ಅಶೋಕ್‌ ಕುಮಾರ್‌ ಶೆಟ್ಟಿ, ಕರುಣಾಕರ ವಿ., ಅವಿನಾಶ್‌ ಉಪಸ್ಥಿತರಿದ್ದರು.
ವಿಟ್ಲ ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಯ ಸಾಧಕ-ಭಾದಕಗಳನ್ನು ಚರ್ಚಿಸಲು ಶನಿವಾರ ಕಟ್ಟಡಗಳ ಮಾಲೀಕರ ಸಭೆ ನಡೆಯಿತು. ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿದರು. ಕರುಣಾಕರ ನಾಯ್ತೊಟ್ಟು, ಸಂಗೀತಾ ಪಾಣೆಮಜಲು, ಅಶೋಕ್‌ ಕುಮಾರ್‌ ಶೆಟ್ಟಿ, ಕರುಣಾಕರ ವಿ., ಅವಿನಾಶ್‌ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿಕೆ
  • ವಿಟ್ಲದಲ್ಲಿ ವರ್ತಕರು, ಕಟ್ಟಡಗಳ ಮಾಲೀಕರ ಸಭೆ
ವಿಟ್ಲ: ಲೋಕೋಪಯೋಗಿ ಇಲಾಖೆಗೆ ಸರ್ಕಾರ ಸರ್ವೇ ನಡೆಸಲು ಸೂಚನೆ ನೀಡಿದ್ದು, ಅನ˜ಕೃತ ಕಟ್ಟಡಗಳು, ರಸ್ತೆ ಒತ್ತುವರಿಯ ಬಗ್ಗೆ ಸರ್ವೇ ನಡೆಯಲಿದೆ. ವಿಟ್ಲವನ್ನು ಅಭಿವೃದ್ಧಿ ಪಡಿಸಬೇಕಾ ಅಥವಾ ಹೀಗೇ ಇರಬೇಕಾ ಎಂಬುದನ್ನು ಇಲ್ಲಿನ ಜನ ತೀರ್ಮಾನಿಸಬೇಕು. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಯಾರ ವಿರುದ್ಧವೂ ಹೋಗುವುದಿಲ್ಲ. ಸಾಧಕ-ಬಾಧಕಗಳ ವಿಚಾರಣೆ ನಡೆಸಿ ರಸ್ತೆಗೆ 22 ಮೀಟರ್‌ ಬಿಡಬೇಕಾದ ಜಾಗವನ್ನು 15 ಮೀಟರ್‌ಗೆ ಇಳಿಸಲು ಸಾಧ್ಯವೇ ಎಂದು ಚರ್ಚಿಸಲಾಗುವುದು ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು.
ವಿಟ್ಲ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪುತ್ತೂರು ರಸ್ತೆ, ಉಕ್ಕುಡ ರಸ್ತೆ, ಸಾಲೆತ್ತೂರು ರಸ್ತೆ, ಕಲ್ಲಡ್ಕ ರಸ್ತೆ ಕಿರಿದಾಗಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆ ಅಭಿವೃದ್ಧಿಯ ಸಾಧಕ-ಬಾಧಕಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಶನಿವಾರ ಕಟ್ಟಡಗಳ ಮಾಲೀಕರ ಸಭೆಯ ನಡೆಸಿ ಮಾತನಾಡಿದರು.
30 ಕೋಟಿ ರೂ. ಬಿಡುಗಡೆ: ಕಬಕ- ವಿಟ್ಲ ರಸ್ತೆ ಚತುಷ್ಪಥ ಕಾಮಗಾರಿಗೆ 30 ಕೋಟಿ ರೂ. ಬಿಡಗಡೆಯಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಎರಡು ಸೇತುವೆ, 20 ಕೋಟಿ ರೂ. ವೆಚ್ಚದಲ್ಲಿ 4 ಕಿ.ಮೀ. ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲರ ಸಹಕಾರಬೇಕಾಗಿದೆ. ಚತುಷ್ಪಥ ಆದರೆ ಉದ್ಯಮ ಹತ್ತು ಪಟ್ಟು ಹೆಚ್ಚಾಗುತ್ತದೆ. ಹೊಸ ಕಟ್ಟಡಗಳನ್ನು ಸೆಟ್‌ಬ್ಯಾಕ್‌ ಬಿಟ್ಟು ನಿರ್ಮಾಣ ಮಾಡಬೇಕು. ಹಳೆಯ ಕಟ್ಟಡ ಬಿದ್ದಾಗ ಜಾಗವನ್ನು ಉಚಿತವಾಗಿ 21 ಮೀಟರ್‌ ಬಿಡಬೇಕಾಗುತ್ತದೆ. ಭೂಸ್ವಾಧೀನ ಮಾಡುವುದಾದರೆ ಸರ್ಕಾರಕ್ಕೆ ಪರಿಹಾರ ನೀಡಲು ಕನಿಷ್ಠ 25 ಕೋಟಿ ರೂ. ಬೇಕಾಗಬಹುದು. ಜನಪ್ರತಿನಿಧಿಯಾಗಿ ಎಲ್ಲರ ಅಭಿಪ್ರಾಯ ಕೇಳಿ ಎಲ್ಲರಿಗೂ ಒಪ್ಪಿಗೆಯಾಗುವುದನ್ನು ಸ್ವೀಕರಿಸಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ ವಿ., ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಅವಿನಾಶ್‌ ಉಪಸ್ಥಿತರಿದ್ದರು.

ಪರ್ಯಾಯ ವ್ಯವಸ್ಥೆಗೆ ವರ್ತಕರ ಸಂಘ ಮನವಿ

ಪಟ್ಟಣ ಪಂಚಾಯಿತಿಯಿಂದ ಸಭೆಯ ಬಗ್ಗೆ ಕರಪತ್ರ ವಿತರಣೆ ಮಾಡುತ್ತಿದ್ದಂತೆ ವರ್ತಕರ ಸಂಘದ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ವರ್ತಕರು ವಿಟ್ಲ ರಸ್ತೆ ಅಭಿವೃದ್ಧಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 2010ರಲ್ಲಿ ಮುಖ್ಯ ರಸ್ತೆಗೆ ಪ್ರತಿಫಲ ಪಡೆಯದೆ ಸ್ಥಳ ಬಿಟ್ಟುಕೊಡಲಾಗಿದೆ. ಈಗ ನಡೆಸುವ ಅಭಿವೃದ್ಧಿ ಕಾಮಗಾರಿ ವರ್ತಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಅನೇಕ ಕಟ್ಟಡಗಳು ಸಂಪೂರ್ಣ ಹಾನಿಯಾಗಲಿದೆ. ಕಟ್ಟಡ ತೆರವು ಮಾಡುವುದರಿಂದ ವ್ಯಾಪಾರ ವಹಿವಾಟಿಗೂ ತೊಂದರೆಯಾಗಲಿದೆ. ಈ ಕಾರಣದಿಂದ ವಿಟ್ಲಕ್ಕೆ ಬೈಪಾಸ್‌ನಂತಹ ಪರ್ಯಾಯ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಂಘದ ಅಧ್ಯಕ್ಷ ಬಾಬು ವಿಟ್ಲ, ಕಾರ್ಯದರ್ಶಿ ಕ್ಲಿಫರ್ಡ್‌ ವೇಗಸ್‌ ತಿಳಿಸಿದರು.
"

ರಸ್ತೆಗೆ 22 ಮೀಟರ್‌ ಬಿಟ್ಟರೆ ವಿಟ್ಲ ಪೇಟೆ ಉಳಿಯಲು ಸಾಧ್ಯವಿಲ್ಲ. ಈಗ ಜಾಗ ಬಿಟ್ಟರೂ ಬಳಿಕ ಪ್ರಾಧಿಕಾರ ರಸ್ತೆ ಪರಿಧಿ ಎಂಬ ನಿಯಮ ತರುತ್ತದೆ. ಸೆಟ್‌ಬ್ಯಾಕ್‌, ಪಾರ್ಕಿಂಗ್‌ ವಿಚಾರಗಳಿಗೆ ಹೊಸ ನಿಯಮ ರೂಪಿಸಬೇಕು.

— ಸುರೇಶ್‌ ಬನಾರಿ, ಉದ್ಯಮಿ

"

ಕಟ್ಟಡಗಳು ಶೇ.70ರಷ್ಟು ಭೂಪರಿವರ್ತನೆ ಆಗಿಲ್ಲ. ಇದಕ್ಕೆ ಪರಿಹಾರ ನೀಡುವಾಗ ಯಾವ ರೀತಿಯ ಮಾನದಂಡವನ್ನು ವಹಿಸಲಾಗುತ್ತದೆ.

— ಅರುಣ್‌ ವಿಟ್ಲ, ಸದಸ್ಯರು, ಪಟ್ಟಣ ಪಂಚಾಯಿತಿ

"

ರಸ್ತೆ ಅಗಲೀಕರಣದ ವೇಳೆ ನಿರ್ಮಿಸಿದ ರಸ್ತೆ ಹಾಗೂ ಅಂಗಡಿಯ ನಡುವೆ ಗುಂಡಿಗಳಿದ್ದು, ಫುಟ್‌ಪಾತ್‌ ನಡೆದಾಡಲು ರಸ್ತೆಯನ್ನೇ ಬಳಸಬೇಕಾಗುತ್ತಿದೆ. ಇದರಿಂದ ವಾಹನ ಓಡಾಟಕ್ಕೆ ತೊಂದರೆಯಾಗುತ್ತದೆ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡಬೇಕು.

— ನೀಲಪ್ಪ ಗೌಡ, ಸಾರ್ವಜನಿಕರು

"

ಹಿಂದೆ ರಸ್ತೆಯ ಒಂದು ಭಾಗದಲ್ಲಿ ಸೆಟ್‌ಬ್ಯಾಕ್‌ ಬಿಟ್ಟಿದ್ದು, ಇನ್ನೊಂದು ಭಾಗದಲ್ಲಿ ಮಾತ್ರ ಸೆಟ್‌ಬ್ಯಾಕ್‌ ಪಡೆದಿಲ್ಲ. ವರ್ಗ ಜಮೀನಿಂದ ಮೊದಲು ಪರಂಬೋಕುಗಳನ್ನು ಹುಡುಕಿ ಅಲ್ಲಿ ಮೊದಲು ಅಗಲೀಕರಣಕ್ಕೆ ಮುಂದಾಗಬೇಕು.

— ಮಾದವ ಕುದ್ರೆತ್ತಾಯ, ಜಾಗದ ಮಾಲೀಕರು
"

ಅಂಗಡಿ ಹಾಗೂ ಜಾಗದ ಮಾಲೀಕರು ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ವಿಟ್ಲ ಪೇಟೆಗೆ ಅಗಲೀಕರಣದ ಅಗತ್ಯವಿದ್ದು, ಎಲ್ಲರೂ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು. ಮಾಲೀಕರ ಮನವೊಲಿಸುವ ಕಾರ್ಯವನ್ನು ಸಾಧ್ಯವಾದಷ್ಟು ಮಾಡಲಾಗುವುದು.

— ಕರುಣಾಕರ ನಾಯ್ತೊಟ್ಟು, ಪಟ್ಟಣ ಪಂಚಾಯಿತಿ ಅಧ್ಯಕ್ಷ

"

ಶಾಸಕರು ಕ್ರಿಯಾಶೀಲರಾಗಿದ್ದು, ದೊಡ್ಡ ಮೊತ್ತದ ಅನುದಾನಗಳನ್ನು ತರುವ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ. ರಾಜಕೀಯೇತರವಾಗಿ ಕೆಲಸ ಕಾರ್ಯಗಳು ನಡೆಯುತ್ತಿವೆ. ವರ್ತಕರ ಬಗ್ಗೆಯೂ ಕಾಳಜಿಯನ್ನು ಇಟ್ಟುಕೊಂಡು ಶಾಸಕರು ಅಭಿವೃದ್ಧಿಗೆ ಮುಂದಾಗಿದ್ದಾರೆ.

— ಅಶೋಕ್‌ ಕುಮಾರ್‌ ಶೆಟ್ಟಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net