ಕಚೇರಿ ಸ್ಥಳಾಂತರದ ಹಿಂದೆ ಲಾಬಿಯ ಶಂಕೆ - ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ವೆಂಕಟ್ರಮಣ ಪುಣಚ ಹೇಳಿಕೆ

Published on

ವಿಟ್ಲ: ಚಂದಳಿಕೆ ಭಾಗದಲ್ಲಿ ಮೆಸ್ಕಾಂ ಕಚೇರಿಗೆ ಮೂಲಸೌಕರ್ಯ ಕಡಿಮೆಯಿದ್ದು, ಜನಸಾಮಾನ್ಯರಿಗೆ ಓಡಾಟಕ್ಕೆ ಬಹಳಷ್ಟು ತೊಂದರೆಯಾಗುತ್ತದೆ. ಗ್ರಾಹಕರು ಬಾಡಿಗೆ ವಾಹನಕ್ಕೆ ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗುತ್ತದೆ. ಸರ್ಕಾರಿ ಬಸ್ ನಿಲ್ದಾಣದ ಬಳಿಯಿರುವ ಮೆಸ್ಕಾಂ ಕಚೇರಿಗೆ ೨೩ ಸಾವಿರ ರೂ. ಬಾಡಿಗೆಯಿದ್ದು, ಸ್ಥಳಾಂತರವಾಗುವ ಕಟ್ಟಡಕ್ಕೆ ೩೮ ಸಾವಿರವಿದೆ. ಈಗಿನ ಆದೇಶದ ಪ್ರಕಾರ ೩೩ ತಿಂಗಳಿಗೆ ಹೆಚ್ಚುವರಿ ೧೫ ಸಾವಿರ ನೀಡುವ ಅವಶ್ಯಕತೆ ಇದೆಯಾ? ಇದರಲ್ಲಿ ಯಾರ ಲಾಬಿ ಇದೆ ಎಂಬುದು ತಿಳಿಯುತ್ತಿಲ್ಲ ಎಂದು ಪುಣಚ ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ವೆಂಕಟ್ರಮಣ ಪುಣಚ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತ ಸಂಘದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್ ಮಾತನಾಡಿ, ಮೆಸ್ಕಾಂ ಕಚೇರಿ ಸ್ಥಳಾಂತರದಿಂದ ಜನರಿಗಾಗುವ ತೊಂದರೆ ಬಗ್ಗೆ ವಿಜಯವಾಣಿ ವರದಿ ಮಾಡಿದ್ದರಿಂದ ಜನರು ಎಚ್ಚೆತ್ತುಕೊಳ್ಳುವಂತಾಗಿದೆ. ಇಲಾಖೆ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ್ದರಿಂದ ಕಚೇರಿ ಈಗ ಇರುವಲ್ಲೇ ಉಳಿಯುವ ನಿರ್ಧಾರ ತೆಗೆದುಕೊಂಡಿದೆ. ಸ್ಥಳೀಯ ಶಾಸಕರು ಸ್ಥಳಾಂತರ ಕೈಬಿಡುವ ವಿಚಾರದಲ್ಲಿ ಪ್ರಯತ್ನ ಮಾಡಿದ್ದಾರೆ. ಮೆಸ್ಕಾಂಗೆ ಲಭ್ಯವಿರುವ ನಿವೇಶನದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಒಂದು ವರ್ಷದ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.


ಕರ್ನಾಟಕ ಕರಾವಳಿ ಜಲ ನೆಲ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ ಮಾತನಾಡಿ ಮೆಸ್ಕಾಂ ಕಚೇರಿಯನ್ನು ವರ್ಷಕ್ಕೊಂದು ಕಡೆಗೆ ಸ್ಥಳಾಂತರ ಮಾಡಿದರೆ ರೈತರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗುತ್ತದೆ. ಈಗಾಗಲೇ ಮೆಸ್ಕಾಂನ ದಾಖಲೆಗಳು ಕಾಣೆಯಾಗುವ ಹಂತಕ್ಕೆ ತಲುಪಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕೆ.ಪಿ.ಟಿ.ಸಿ.ಎಲ್. ಉಪಕೇಂದ್ರದ ಸಮೀಪದಲ್ಲಿ ಖಾಸಗಿಯವರಿಂದ ಜಮೀನು ಪಡೆದುಕೊಂಡಿದ್ದು, ಅದರಲ್ಲಿ ಉಳಿಕೆಯಾದ ಸ್ಥಳದಲ್ಲಿ ಮೆಸ್ಕಾಂ ಕಚೇರಿ ಕಟ್ಟಡ ನಿರ್ಮಾಣ ಮಾಡಬೇಕು. ಸರ್ಕಾರಿ ಕಚೇರಿಗಳನ್ನು ಸಾರ್ವಜನಿಕರ ಓಡಾಟಕ್ಕೆ ಸಹಾಯವಾಗುವ ರೀತಿಯಲ್ಲಿ ಜನಪ್ರತಿನಿಽಗಳು ನಿರ್ಮಾಣ ಮಾಡಬೇಕೆಂದು ತಿಳಿಸಿದರು.


ವರ್ಗಾವಣೆಗೆ ತಡೆಯುವಂತೆ ಪತ್ರ
ಕಚೇರಿ ಸ್ಥಳಾಂತರ ವಿಚಾರದ ಬಗ್ಗೆ ಆ.೧೧ರಂದು ವಿಜಯವಾಣಿ ವರದಿ ಪ್ರಕಟಿಸಿದ್ದು, ೧೨ರಂದು ಮೆಸ್ಕಾಂ ಅಽಕ್ಷಕರು ಸ್ಥಳಾಂತರ ಅಽಕೃತ ಆದೇಶಕ್ಕೆ ಸಹಿ ಮಾಡಿದ್ದಾರೆ. ೧೨ಕ್ಕೆ ಕರ್ನಾಟಕ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಡಳಿತ ನಿರ್ದೇಶಕರಿಗೆ ಪತ್ರ ಬರೆದು ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಾರ್ವಜನಿಕರಿಂದ ಮೆಸ್ಕಾಂ ವಿವಿಧ ಹಂತದ ಅಽಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರಿಗೆ ಪತ್ರ ನೀಡಲಾಗಿದೆ. ೧೯ರಂದು ಪುಣಚ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ವಿರೋಧ ವ್ಯಕ್ತಪಡಿಸಿ ಮೆಸ್ಕಾಂ ಎಂಡಿಗೆ ಪತ್ರ ಬರೆಯಲಾಗಿದೆ.


ಸುಲಿಗೆ ನಿಲ್ಲಿಸುವಂತೆ ಪ್ರತಿಭಟನೆ
ಹೆಸರು ಬದಲಾವಣೆಯ ವಿಚಾರದಲ್ಲಿ ೫೦೦ ರೂ. ಛಾಪಾ ಕಾಗದ ಬೇಕೆಂದು ಸಾವಿರಾರು ರೈತರಿಗೆ ತೊಂದರೆ ನೀಡಲಾಗುತ್ತಿದೆ. ಪಂಪ್‌ಸೆಟ್ ಆಧಾರ್ ಲಿಂಕ್ ಮಾಡಬಾರದೆಂಬ ಹೇಳಿಕೆಯನ್ನು ರೈತರಿಗೆ ಈಗಾಗಲೇ ನೀಡಲಾಗಿದೆ. ಈ ಎಲ್ಲ ವಿಚಾರವನ್ನು ವಿರೋಧಿಸಿ, ಸುಲಿಗೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ, ರೈತ ಸಂಘದಿಂದ ಸೆ.೪ರಂದು ಮೆಸ್ಕಾಂ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net